1
1

ಅಮಾಯಕ ಯುವಕನೊಬ್ಬ ಹೇಗೆ ಪ್ರಳಯರುದ್ರನ ಅವತಾರ ತಾಳಿದ, ಸಮಯ ಸಂದರ್ಭ ಆತನನ್ನು ಹೇಗೆ ಒಬ್ಬ ಕೊಲೆಗಾರನನ್ನಾಗಿ ಮಾಡಿತು ಎಂಬುದನ್ನು ನಿರ್ದೇಶಕ ಪ್ರೇಮ್ ಕೆಡಿ ಚಿತ್ರದ ಮೂಲಕ ಹೇಳಿದ್ದಾರೆ. ಅದರಲ್ಲೂ ಧ್ರುವ ಸರ್ಜಾ ತನ್ನ ಅದ್ಭುತ ಅಭಿನಯದ ಮೂಲಕ ಉಳಿದೆಲ್ಲಾ ಪಾತ್ರಗಳನ್ನು ಹಿಂದಿಕ್ಕಿದ್ದಾರೆ. ಮುಗ್ಧ ಕಾಳಿ,ಮಾಸ್ ಕೆಡಿಯಾಗಿ ಮನೋಜ್ಞ ಅಭಿನಯ ನೀಡಿದ್ದಾರೆ. ರಾಜಕೀಯ, ರೌಡಿಸಂ ಸುಳಿಯಲ್ಲಿ ಸಿಲುಕಿ ಮುಗ್ಧನಾಗಿದ್ದ ನಾಯಕ ಹೇಗೆ ಮಚ್ಚು ಹಿಡಿಯುವ ಸಂದರ್ಭ ಸೃಷ್ಟಿಯಾಗುತ್ತದೆ ಎಂಬುದನ್ನು ತೆರೆಮೇಲೆ ಮಾಸ್ ಮಸಾಲಾ ಕಥೆಯೊಂದಿಗೆ ಪ್ರೇಮ್ ನಿರೂಪಿಸಿದ್ದಾರೆ.

ಕೆಡಿ 1975-80ರ ದಶಕದಲ್ಲಿ ಬೆಂಗಳೂರಲ್ಲಿ ನಡೆಯುವ ಕಥೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್, ಕಿಚ್ಚ ಸುದೀಪ್ ಹೀಗೆ ಸ್ಟಾರ್ ಕಲಾವಿದರನ್ನೆಲ್ಲ ಒಗ್ಗೂಡಿಸಿ ರೆಟ್ರೋ ಕಥೆಯನ್ನು ತೆರೆಮೇಲೆ ತಂದಿದ್ದಾರೆ. ಏನಿದು ಕಾಳಿದಾಸನ ರಕ್ತಚರಿತ್ರೆ, ಆತ ರಕ್ತದಕೋಡಿ ಹರಿಸೋಕೆ ಕಾರಣವಾದರೂ ಏನು ಎಂದು ತಿಳಿಯಲು ನೀವು ಚಿತ್ರವನ್ನು ನೋಡಲೇಬೇಕು. ಪೊಲೀಸ್ ಅಧಿಕಾರಿ ಸೂರಪ್ಪ(ರವಿಶಂಕರ್) ಕಾಳಿ ಅಲಿಯಾಸ್ ಕೆಡಿಯ ಕಥೆಯನ್ನು ಹೇಳುತ್ತ ಹೋದಂತೆ ಕಥೆ ಬಿಚ್ಚಿಕೊಳ್ಳುತ್ತದೆ. ತನ್ನ ಅಧಿಕಾರಾವಧಿಯಲ್ಲಿ ನಡೆದ ಕಾಳಿದಾಸ(ದ್ರುವಸರ್ಜಾ) ಹಾಗೂ ಢಾಕ್ ದೇವ(ಸಂಜಯದತ್)ನ ರಕ್ತಚರಿತ್ರೆಯನ್ನು ಪೊಲೀಸರಿಗೆ ವಿವರಿಸುತ್ತಾನೆ.
1975ರ ಸಮಯದಲ್ಲಿ ಬೆಂಗಳೂರಿನಲ್ಲಿ ಅಂಡರ್ ವರ್ಲ್ಡ್, ಆಗ ಬೆಂಗಳೂರನ್ನು ಆಳುತ್ತಿದ್ದ ಢಾಕ್ದೇವಾ (ಸಂಜಯ್ ದತ್) ಎಂಬ ಡಾನ್ ಕಥೆ ತೆರೆದುಕೊಳ್ಳುತ್ತದೆ. ಸಾಮಾನ್ಯ ಕುಸ್ತಿ ಪೈಲ್ವಾನ್ ಆಗಿದ್ದ ದೇವಾ ದೊಡ್ಡ ಡಾನ್ ಆಗಿ ಬೆಳೆಯುವಲ್ಲಿ ರಾಜ್ಯದ ಸಿಎಂ ಕೃಪೆಯೂ
ಇರುತ್ತದೆ. ತಂದೆ ತಾಯಿ ಇಲ್ಲದ ಕಾಳಿದಾಸ(ಧೃವ ಸರ್ಜಾ), ಧರ್ಮ(ರಮೇಶ್ ಅರವಿಂದ್) ಅವರ ಇಬ್ಬರು ಸೋದರಿಯರದು ಸಖೀ ಕುಟುಂಬ. ಆಗೆಲ್ಲಾ ಸೀಮೆಎಣ್ಣೆಗೆ ತುಂಬಾ ಬೆಲೆ. ಅಣ್ಣನಿಗೆ ಹೊರೆಯಾಗಬಾರದು ಎಂದು ಓದನ್ನು ಮೊಟಕುಗೊಳಿಸಿ, ಸೀಮೆಎಣ್ಣೆ ವ್ಯಾಪಾರ ಮಾಡುತ್ತಿರುವ ಕಾಳಿದಾಸ ಬೆಳಿಗ್ಗೆ ಹಾಲು ವಿತರಕ, ಅದೇ ಏರಿಯಾದ ಅಗರಬತ್ತಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಮಾತಿನ ಮಲ್ಲಿ ಮಚ್ ಲಕ್ಷ್ಮಿ (ರೀಷ್ಮಾ) ಹಾಗೂ ಕಾಳಿಯ ನಡುವೆ ಆಗಾಗ ಮಾತಿನ ಚಕಮಕಿ ನಡೆಯುತ್ತಿರುತ್ತೆ, ಚಿಕ್ಕ ವಯಸಿಂದ ಗರಡಿ ಮನೆಯಲ್ಲಿ ಸ್ನೇಹಿತನಾಗಿದ್ದ ದೇವಾ ಈಗ ಗ್ಯಾಂಗ್ಸ್ಟರ್ ಆಗಿದ್ದರೂ ಆತನ ಮೇಲೆ ಕಾಳಿದಾಸನಿಗೆ ಇನ್ನಿಲ್ಲದ ಅಭಿಮಾನ. ಮಕ್ಕಳಿಗೆ ಪಾಠ ಹೇಳಿಕೊಡುವ ಮೇಷ್ಟ್ರು ಧರ್ಮ(ರಮೇಶ್ ಅರವಿಂದ್)ನಿಗೆ ತಮ್ಮ ಶಾಲೆಗೆ ಹೋಗಲಿಲ್ಲವಲ್ಲ ಎಂಬ ಚಿಂತೆ. ಅಕ್ಕ, ತಂಗಿಯ ಜತೆ ಲವಲವಿಕೆಯಿಂದಿದ್ದ ಕಾಳಿಯ ಲೈಫಲ್ಲಿ ಬಿರುಗಾಳಿಯೊಂದು ಬೀಸುತ್ತದೆ, ತಾನು ಆರಾಧಿಸುವ ಧಕ್ದೇವಾ ವಿರುದ್ಧವೇ ತೊಡೆತಟ್ಟಿ ನಿಲ್ಲಬೇಕಾಗುತ್ತದೆ, ಮುಂದೆ ನಡೆಯುವುದೇ ರಕ್ತದೋಕುಳಿಯಾಟ. ಮುಗ್ಧ ಕಾಳಿ, ಪ್ರಳಯರುದ್ರನ ಅವತಾರ ತಾಳುತ್ತಾನೆ, ಹಾಲು ಮಾರುವ ಕೈಯಲ್ಲಿ ಮಚ್ಚು ಝಳಪಿಸುತ್ತದೆ. ತನ್ನ ಮನೆಯವರನ್ನ 24 ಗಂಟೆಯಲ್ಲಿ ಹೊಡೆದು ಹಾಕುತ್ತೇನೆಂದು ಚಾಲೆಂಜ್ ಮಾಡಿದ ದೇವಾನ ಸಹಚರರ ರುಂಡಗಳನ್ನು ಕಾಳಿ ಚೆಂಡಾಡುತ್ತಾನೆ. ಮಾಸ್ ವೀಕ್ಷಕರನ್ನು ರಂಜಿಸಲೆಂದೇ ಪ್ರೇಮ್ ಸೆಂಟಿಮೆಂಟ್ ಹಿನ್ನೆಲೆಯಲ್ಲಿ ಆಕ್ಷನ್ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಬಜಾರಿ ಲಕ್ಷ್ಮಿ ಪಾತ್ರದಲ್ಲಿ ರೀಷ್ಮಾ ನಾಣಯ್ಯ ಗಮನ ಸೆಳೆಯುತ್ತಾರೆ. ಧೃವ ಸರ್ಜಾ ಕಾಳಿದಾಸ, ಕೆಡಿಯಾಗಿ ಎರಡು ಶೇಡ್ ಪಾತ್ರಕ್ಕೆ ಜೀವ ತುಂಬಿದ್ದಾರೆ, ಸಂಜಯ್ದತ್, ಶಿಲ್ಪಾಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಎಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಚಿತ್ರದ ಕೊನೆಯಲ್ಲಿ ಬರುವ ಸುದೀಪ್ ಅವರ ಪಾತ್ರ ಎರಡನೇ ಭಾಗಕ್ಕೆ ಲಿಂಕ್ ಕೊಡುತ್ತದೆ, 70ರ ದಶಕದ ಬೆಂಗಳೂರನ್ನು ಕಲಾ ನಿರ್ದೇಶಕ ಮೋಹನ್ ಬಿ.ಕೆರೆ ಚಿಕ್ಕ ಚಿಕ್ಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಸೂಕ್ಷ್ಮವಾಗಿ ಸೃಷ್ಟಿಸಿದ್ದಾರೆ. ಅವರು ಹಾಕಿರುವ ಎಫರ್ಟ್ ಚಿತ್ರದ ಪ್ರತಿ ಫ್ರೇಮ್ನಲ್ಲೂ ಕಾಣುತ್ತದೆ. ಆಗಿನ ಕಾಲದಲ್ಲಿ ಬಳಸುತ್ತಿದ್ದ ಲೀಟರ್, ಹಾಲಿನ ಕ್ಯಾನ್, ಡಬಲ್ ಡೆಕ್ಕರ್ ಬಸ್, ಮೋಟಾರ್ ಸೈಕಲ್, ರಸ್ತೆಗಳು, ಟೌನ್ ಹಾಲ್, ಆಗಿದ್ದ ಸಿನಿಮಾ ಪೋಸ್ಟರ್ ಗಳು ಹೀಗೆ ಚಿಕ್ಕ ಚಿಕ್ಕ ವಿಷಯವನ್ನೂ ನೈಜವಾಗಿರುವಂತೆ ನೋಡಿಕೊಂಡಿದ್ದಾರೆ. ಚಿತ್ರದ ಕಥೆ ಸಿಂಪಲ್ ಅನ್ನಿಸಿದರೂ, ಪ್ರೇಮ್ ಅದಕ್ಕೆ ಮಾಸ್ ಮಸಾಲೆ ಬೆರೆಸಿ ಪ್ರೇಕ್ಷಕರಿಗೆ ಇಷ್ಟವಾಗುವಂತೆ ಕಟ್ಟಿಕೊಟ್ಟಿದ್ದಾರೆ. ಯಾವುದೇ ದೃಶ್ಯವನ್ನೂ ಹೆಚ್ಚು ಎಳೆದಾಡದೇ ಕಥೆಯನ್ನ ವೇಗವಾಗಿ ಹೇಳಿದ್ದಾರೆ. ಎಲ್ಲ ಘಟನೆಗಳೂ ಫಾಸ್ಟಾಗಿ ನಡೆದು ಹೋಗುತ್ತವೆ. ಅರ್ಜುನ್ ಜನ್ಯ ಅವರ ಸಂಗೀತದ ಹಾಡುಗಳು ಈಗಾಗಲೇ ಜನಮನ ಸೂರೆಗೊಂಡಿವೆ. ಬ್ಯಾಕ್ ಗ್ರೌಂಡ್ ಮ್ಯೂಸಿಕ್, ಕ್ಯಾಮೆರಾ ವರ್ಕ್ ಚಿತ್ರವನ್ನು ಬೇರೆಯದೇ ಲೆವೆಲ್ ಗೆ ತೆಗೆದುಕೊಂಡು ಹೋಗಿವೆ. ಮಾಸ್ ಪ್ರಿಯರಿಗಂತೂ ಕೆಡಿ ಭರ್ಜರಿ ಹಬ್ಬದೂಟ ಎನ್ನಬಹುದು. ಕೆವಿಎನ್ ನಂಥ ಬಿಗ್ ಪ್ರೊಡಕ್ಷನ್ ಹೌಸ್ ನಿಂದಲೇ ಇದೆಲ್ಲಾ ಸಾಧ್ಯವಾಗಿದೆ.