1
1
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ(ಕೆಎಸ್‌ಡಿಎಲ್)ದ ಉತ್ಪನ್ನಗಳ ರಫ್ತು ಹೆಚ್ಚಿಸಲು ನೀಲನಕ್ಷೆ ಸಿದ್ಧಪಡಿಸಲಾಗಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ಈಚೆಗೆ ನಡೆದ ಮೈಸೂರು ಸ್ಯಾಂಡಲ್ ರಾಯಭಾರಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಎಸ್‌ಡಿಎಲ್ ಕೇವಲ ಸ್ಯಾಂಡಲ್ ಸೋಪ್‌ಗೆ ಮಾತ್ರ ಸೀಮಿತವಾಗಿಲ್ಲ. ನಾವೀಗ ಜಾಸ್ಮೀನ್ ಪರಿಮಳದ ಐಷಾರಾಮಿ ಸೋಪನ್ನೂ ತಯಾರಿಸುತ್ತಿದ್ದೇವೆ. ಯೂರೋಪಿನ ಮಾರುಕಟ್ಟೆಯಲ್ಲಿ ಈ ಥರದ ಸಾಬೂನಿಗೆ ತುಂಬಾ ಬೇಡಿಕೆ ಇದೆ. ಇದೇ ರೀತಿಯಲ್ಲಿ ಸುಗಂಧ ದ್ರವ್ಯಗಳ ವಲಯವನ್ನೂ ಪ್ರವೇಶಿಸಿದ್ದೇವೆ ಎಂದು ತಿಳಿಸಿದರು.

ಮೈಸೂರು ಸ್ಯಾಂಡಲ್ ನಮ್ಮ ನಾಡಿನ ಪರಂಪರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿದ ಈ ಸಂಸ್ಥೆಯನ್ನು ನಾವು ಜಾಗತಿಕ ಮಟ್ಟದಲ್ಲಿ ಬೆಳೆಸಬೇಕಿದೆ. ಸಂಸ್ಥೆಯ ಜಾಗತಿಕ ವಿಸ್ತರಣೆಯ ಭಾಗವಾಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ನೂತನ ರಾಯಭಾರಿಯಾಗಿ ಘೋಷಿಸಲಾಗಿದೆ ಎಂದು ತಿಳಿಸಿದರು.
ನೂತನ ರಾಯಭಾರಿ ತಮನ್ನಾ ಭಾಟಿಯಾ ಮಾತನಾಡಿ, ಮೈಸೂರು ಸ್ಯಾಂಡಲ್ ಸೋಪು ಕೇವಲ ಒಂದು ಸಾಬೂನಲ್ಲ. ಇದರೊಂದಿಗೆ ಭಾವನೆಗಳು, ಬಾಲ್ಯ ಮತ್ತು ಸುಮಧುರ ನೆನೆಪುಗಳೆಲ್ಲ ಹೆಣೆದುಕೊಂಡಿವೆ. ಇದು ಪರಿಪೂರ್ಣತೆ ಮತ್ತು ಸತ್ಯದ ಸಂಗಮ. ಮಾರುಕಟ್ಟೆಯಲ್ಲಿ ಇದಕ್ಕೆ ಸಾಟಿಯಾದ ಇನ್ನೊಂದು ಸೋಪ್ ಇಲ್ಲ. ಮೈಸೂರು ಸ್ಯಾಂಡಲ್ ಸೋಪ್‌ಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದು ಬಣ್ಣಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ರೀತಿಯ 57ಕ್ಕೂ ಹೆಚ್ಚು ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು. ನಟಿ ತಮನ್ನಾ ಅವರು ಸಂಸ್ಥೆಯ ಪರವಾಗಿ ನಡೆಸಿರುವ ಪ್ರಚಾರದ ಜಾಹೀರಾತುಗಳನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್. ನಾಡಗೌಡ (ಅಪ್ಪಾಜಿ), ಕೆಎಸ್‌ಡಿಎಲ್ ಎಂಡಿ. ಕೆ.ಪಿ.ಎಂ. ಪ್ರಶಾಂತ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಸ್ವತಂತ್ರ ನಿರ್ದೇಶಕ ಅರವಿಂದ ಗಲಗಲಿ, ತಾಂತ್ರಿಕ ಸಲಹೆಗಾರ ರಜನೀಕಾಂತ್, ಎಂಎಸ್‌ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ದಶಕಗಳ ಇತಿಹಾಸವಿರುವ ಕೆಎಸ್‌ಡಿಎಲ್ ಈಗ ಹೊಸ ಆವಿಷ್ಕಾರ ಮತ್ತು ಮಾರುಕಟ್ಟೆ ತಂತ್ರಗಳೊಂದಿಗೆ ಯಶಸ್ಸಿನತ್ತ ಹೆಜ್ಜೆ ಹಾಕುತ್ತಿದೆ. ಪಾರಂಪರಿಕ ಬ್ರ‍್ಯಾಂಡ್ ಹೊಂದಿರುವ ಸಂಸ್ಥೆ, ಪ್ರಸಕ್ತ ಸಾಲಿನಲ್ಲಿ 2 ಸಾವಿರ ಕೋಟಿ ರೂ.ಗಳ ನಿವ್ವಳ ವಹಿವಾಟಿನ ಗುರಿಯನ್ನು ಹಾಕಿಕೊಂಡಿದೆ ಎಂದು ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್. ನಾಡಗೌಡ(ಅಪ್ಪಾಜಿ) ಅವರು ತಿಳಿಸಿದರು.
ಸಂಸ್ಥೆಯು ಕಳೆದ ಮೂರು ವರ್ಷಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ೨೦೨೨-೨೩ರಲ್ಲಿ ೧,೩೭೫ ಕೋಟಿ ರೂ.ಗಳಿದ್ದ ವಹಿವಾಟು, ೨೦೨೪-೨೫ಕ್ಕೆ ೧,೭೮೭ ಕೋಟಿ ರೂ. ಏರಿಕೆಯಾಗಿದೆ. ಈ ವರ್ಷ ಇದು ೨೦೦೦ ಕೋಟಿ ರೂ. ತಲುಪುವ ವಿಶ್ವಾಸವಿದೆ. ಲಾಛದ ವಿಚಾರದಲ್ಲೂ ಕೆಎಸ್‌ಡಿಎಲ್ ಹಿಂದೆ ಬಿದ್ದಿಲ್ಲ. ಕಳೆದ ವರ್ಷ ೪೫೧ ಕೋಟಿ ರೂ. ಲಾಭ ಗಳಿಸಿದ್ದು, ಈ ಬಾರಿ ೫೦೦ ಕೋಟಿ ಲಾಭದ ನಿರೀಕ್ಷೆಯಿದೆ. ಸೋಶಿಯಲ್ ಮೀಡಿಯಾದಲ್ಲಿ ೩ ಕೋಟಿ ಫಾಲೋಯರ್ಸ್ ಹೊಂದಿರುವ, ರಾಷ್ಟ್ರಮಟ್ಟದ ವರ್ಚಸ್ಸು ಹೊಂದಿರುವ ತಮನ್ನಾ ಅವರನ್ನು ಬ್ರ‍್ಯಾಂಡ್ ಅಂಬಾಸಿಡರ್ ಮಾಡಿರುವುದು ಮತ್ತಷ್ಟು ಬಲ ಸಿಗಲಿದೆ ಎಂದು ಸಿ.ಎಸ್. ನಾಡಗೌಡ ತಿಳಿಸಿದರು.

ಮೈಸೂರು ಸಿಲ್ಕ್ ಸೀರೆಯಲ್ಲಿ
ಮಿಂಚಿದ ಮಿಲ್ಕಿ ಬ್ಯೂಟಿ ತಮನ್ನಾ
ಕರ್ನಾಟಕದ ಹೆಮ್ಮೆಯ ಸಂಕೇತವಾದ ಮೈಸೂರು ಸ್ಯಾಂಡಲ್ ಸೋಪ್‌ನ ಪ್ರಚಾರ ರಾಯಭಾರಿಯಾಗಿ ಮುಂದಿನ ಎರಡು ವರ್ಷದ ಅವಧಿಗೆ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು ಘೋಷಣೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ತಿಳಿಗೆಂಪು ಬಣ್ಣದ ಮೈಸೂರು ಸಿಲ್ಕ್ ಸೀರೆ ಉಟ್ಟುಕೊಂಡು ವೇದಿಕೆಗೆಆಗಮಿಸಿದ ತಮನ್ನಾ ಭಾಟಿಯಾ ಕನ್ನಡದಲ್ಲಿಯೇ ಮಾತು ಆರಂಭಿಸುವ ಮೂಲಕ ನೆರೆದಿದ್ದವರನ್ನು ಮೋಡಿ ಮಾಡಿದರು.
ಕರ್ನಾಟಕದ ಹೆಮ್ಮೆಯ ಸಂಕೇತವಾದ ಮೈಸೂರು ಸ್ಯಾಂಡಲ್ ಸೋಪ್‌ನ ಪ್ರಚಾರ ರಾಯಭಾರಿಯಾಗಿ ಮುಂದಿನ ಎರಡು ವರ್ಷದ ಅವಧಿಗೆ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು ಘೋಷಣೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ತಿಳಿಗೆಂಪು ಬಣ್ಣದ ಮೈಸೂರು ಸಿಲ್ಕ್ ಸೀರೆ ಉಟ್ಟುಕೊಂಡು ವೇದಿಕೆಗೆಆಗಮಿಸಿದ ತಮನ್ನಾ ಭಾಟಿಯಾ ಕನ್ನಡದಲ್ಲಿಯೇ ಮಾತು ಆರಂಭಿಸುವ ಮೂಲಕ ನೆರೆದಿದ್ದವರನ್ನು ಮೋಡಿ ಮಾಡಿದರು.