Popular Posts

ಜನವರಿ 2ಕ್ಕೆ ಜಗನ್ಮಾತೆ ಅಕ್ಕಮಹಾದೇವಿ

ಹನ್ನೆರಡನೇ ಶತಮಾನದಲ್ಲಿ ಬಾಳಿ ಬದುಕಿದ ಮಹಾಶಿವಶರಣೆ ಶ್ರೀ ಅಕ್ಕಮಹಾದೇವಿ ಅವರು ತನ್ನ ವಚನಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದವರು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ-ಶಿರಾಳಕೊಪ್ಪದ ನಡುವೆ ಇರುವ ಉಡುತಡಿ ಅಥವಾ ಉಡಗಣಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ಇವರು, ಜೀವನದಲ್ಲಿ ವೈರಾಗ್ಯದಿಂದ ಎಲ್ಲವನ್ನೂ ತ್ಯಜಿಸಿ ಹೊರಟು, ಮುಂದೆ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಅಲ್ಲಮಪ್ರಭು, ಬಸವಣ್ಣ, ಚೆನ್ನಬಸವಣ್ಣ, ಸಿದ್ಧರಾಮ ಮೊದಲಾದ ಶಿವಶರಣರೊಡನೆ ಕಲ್ಯಾಣದಕ್ರಾಂತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅಲ್ಲದೆ ಶ್ರೀಚನ್ನಮಲ್ಲಿಕಾರ್ಜುನ ಎಂಬ ಅಂಕಿತ ನಾಮದಲ್ಲಿ ವಚನ ಸಾಹಿತ್ಯಕ್ಕೆ (ಶರಣಸಾಹಿತ್ಯ) ತಮ್ಮದೇ ಆದ ಸೇವೆ ಸಲ್ಲಿದ್ದಾರೆ. ಇಂಥ ಮಹಾಶಿವಶರಣೆಯ ಕಥೆಯನ್ನು ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ವಿಷ್ಣುಕಾಂತ್.ಬಿ.ಜೆ. ಅವರು ಜಗನ್ಮಾತೆ ಅಕ್ಕಮಹಾದೇವಿ ಚಿತ್ರದ ಮೂಲಕ ಹೇಳಹೊರಟಿದ್ದಾರೆ.

ಹೊಸ ವರ್ಷದ ಕೊಡುಗೆಯಾಗಿ ಜನವರಿ ೨ರಂದು ಈ ಚಿತ್ರ ರಾಜ್ಯಾದ್ಯಂತ ತೆರೆಗೆ ಬರಲಿದೆ, ಮನಸುಗಳ ಮಾತು ಮಧುರ, ಡಾ.ಅಂಬೇಡ್ಕರ್, ಗಂಗಾಕಾವೇರಿ, ಕಲ್ಯಾಣ ಕುವರದಂಥ ಚಿತ್ರಗಳನ್ನು ನಿರ್ದೇಶಿಸಿದ ವಿಷ್ಣುಕಾಂತ್.ಬಿ.ಜೆ ಅವರು ಭರತ್ ಸಿನಿ ಕ್ರಿಯೇಶನ್ಸ್ ಮೂಲಕ ಈ ಚಿತ್ರದ ನಿರ್ಮಾಣ ಹಾಗೂ ನಿರ್ದೇಶನ ಮಾಡಿದ್ದಾರೆ, ಜತೆಗೆ ಕೌಶಿಕ ಮಹಾರಾಜ ಹಾಗೂ ಬಸವಣ್ಣನ ಪಾತ್ರದಲ್ಲೂ ಸಹ ಕಾಣಿಸಿಕೊಂಡಿದ್ದಾರೆ. ಸುಮಾರು ೯೦೦ ವರ್ಷದ ಹಿಂದೆ ಬಾಳಿ ಬದುಕಿದ ಶಿವಶರಣೆ ಅಕ್ಕಮಹಾದೇವಿಯ ಜೀವನ ಗಾಥೆಯನ್ನು ಹೇಳುವ ‘ಜಗನ್ಮಾತೆ ಅಕ್ಕಮಹಾದೇವಿ’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ‘ಯು’ ಪ್ರಮಾಣ ಪತ್ರ ನೀಡಿದೆ.

ಈ ಚಿತ್ರದಲ್ಲಿ ಸುಲಕ್ಷಾ ಕೈರಾ ಅವರು ಅಕ್ಕಮಹಾದೇವಿಯ ಪಾತ್ರದಲ್ಕಿ ಕಾಣಿಸಿಕೊಂಡಿದ್ದಾರೆ, ಅಲ್ಲದೆ ಸುಚೇಂದ್ರ ಪ್ರಸಾದ್ ಅವರು ಅಲ್ಲಮ ಪ್ರಭುವಾಗಿ, ತಬಲಾನಾಣಿ ಅವರು ಮಂತ್ರಿ ವಸಂತಕನಾಗಿ ಕಾಣಿಸಿಕೊಂಡಿದ್ದಾರೆ, ಉಳಿದಂತೆ ಪ್ರಮುಖ ತಾರಾಗಣದಲ್ಲಿ ಹಿರಿಯನಟಿ ಭವ್ಯ, ಶ್ವೇತಾ, ಬಿರಾದಾರ್, ಮೈಸೂರು ಹೆಲನ್, ಪಲ್ಲಕ್ಕಿ ರಾಧಾಕೃಷ್ಣ, ಎಂ.ಪಾಟೀಲ್ ಮುಂತಾದವರು ನಟಿಸಿದ್ದಾರೆ. ರವಿ ಸುವರ್ಣ ಅವರ ಛಾಯಾಗ್ರಹಣ, ಪಳನಿ ಸೇನಾಪತಿ ಅವರ ಸಂಗೀತ ನಿರ್ದೇಶನ, ಮದನ್ ಹರಿಣಿ ಅವರ ನೃತ್ಯನಿರ್ದೇಶನ, ಅಮಿತ್ ಜವಳಕರ ಅವರ ಸಂಕಲನ ಈ ಚಿತ್ರಕ್ಕಿದೆ. ಅಕ್ಕಮಹಾದೇವಿಯ ೨೧ ಹಾಗೂ ಬಸವಣ್ಣನವರ ಒಂದು ವಚನವನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ, ಉಳಿದಂತೆ ವಿಷ್ಣುಕಾಂತ್ ಅವರೇ ೪ ಹಾಡುಗಳ ಸಾಹಿತ್ಯ ರಚಿಸಿದ್ದಾರೆ. ಗುಲ್ಬರ್ಗ, ಬೀದರ್, ಶ್ರೀಶೈಲಂನ ಕಾಡುಗುಡ್ಡದ ಸರೋವರ ಜಲಪಾತಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹೊಸ ವರ್ಷದ ಎರಡನೇ ದಿನ ಅಂದರೆ ಜನವರಿ ೨ಕ್ಕೆ ಜಗನ್ಮಾತೆ ಅಕ್ಕಮಹಾದೇವಿ ಚಿತ್ರವು ರಾಜ್ಯಾದ್ಯಂತ ಹಾಗೂ ಮಹಾರಾಷ್ಟ್ರ ಸೊಲ್ಲಾಪುರದಲ್ಲಿಯೂ ಸಹ ಬಿಡುಗಡೆಯಾಗಲಿದೆ.

Leave a Reply

Your email address will not be published. Required fields are marked *