1
1
Rating: *** (3/5)
ಕಮಲ(ತಾವರೆ) ಹೂವಿಗೆ ಪುರಾಣ ಕಾಲದಿಂದಲೂ ಅದರದೇ ಆದ ಪ್ರಾಮುಖ್ಯತೆ ಇದೆ. ಆ ಹೂವಿನ ಬಗ್ಗೆಯೇ ಮಾಡಿದಂಥ ಚಿತ್ರ ಪದ್ಮಗಂಧಿ ಈವಾರ ತೆರೆಕಂಡಿದೆ. ಕನ್ನಡ ಅಲ್ಲದೆ ಸಂಸ್ಕೃತ, ಹಿಂದಿ ಭಾಷೆಯಲ್ಲೂ ನಿರ್ಮಾಣವಾಗಿರುವ ಈ ಚಿತ್ರ ತನ್ನ ಕಂಟೆಂಟ್ ಮೂಲಕವೇ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಸಾತ್ವಿಕ ಪರಂಪರೆಯ ಜತೆಗೆ ಪ್ರಾಚೀನ ಆಚಾರ, ವಿಚಾರಗಳ ಮಹತ್ವವನ್ನು ಎಳೆ ಎಳೆಯಾಗಿ ಈ ಚಿತ್ರದಲ್ಲಿ ಬಿಚ್ಚಿಡಲಾಗಿದೆ.
ಹಿರಿಯ ನಟ ಸುಚೇಂದ್ರ ಪ್ರಸಾದ್ ಅವರ ನಿರ್ದೇಶನದ ಈ ಚಿತ್ರವನ್ನು ಪ್ರೊ.ಎಸ್.ಆರ್. ಲೀಲಾ ಅವರ ಕಾದಂಬರಿ ಆಧರಿಸಿ, ಅವರೇ ನಿರ್ಮಾಣ ಸಹ ಮಾಡಿದ್ದಾರೆ. ದೈವಿಕ ಪುಷ್ಪ ಎಂದೇ ಕರೆಯಲ್ಪಡುವ ಕಮಲದ ಹೂವಿನ ಕುರಿತು ಅನಾದಿ ಕಾಲದಿಂದಲೂ ಅದರ ಮಹತ್ವ ಮತ್ತು ಬಳಕೆಯ ಕುರಿತು ಚಿತ್ರದಲ್ಲಿ ನಿರ್ದೇಶಕರು ಎಳೆ ಎಳೆಯಾಗಿ ವಿವರಿಸಿದ್ದಾರೆ.
ಗ್ರಾಮವೊಂದರ ಸಂಸ್ಕೃತ ಗುರುಕುಲ ಪಾಠಶಾಲೆಯಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿನಿಗೆ ಕೆರೆಯಲ್ಲಿ ಅರಳುವ ತಾವರೆ ಹೂವಿನ ಜೊತೆಗೆ ಬೆಸೆದುಕೊಂಡ ಪ್ರೇಮ ಆಕೆಯನ್ನು ಆಳವಾದ ಅಧ್ಯಯನದಲ್ಲಿ ತೊಡಗಿಸುತ್ತದೆ. ಆಕೆ ಅದನ್ನು ಕುತೂಹಲದಿಂದ ವೀಕ್ಷಿಸತೊಡಗುತ್ತಾಳೆ. ಸಿನಿಮಾ ಹಾಡುಗಳಲ್ಲಿ, ಸಂಸ್ಕೃತ ಶ್ಲೋಕಗಳಲ್ಲಿ ಕಮಲದ ಹೂವಿನ ವರ್ಣನೆ ಬರುವಾಗ ಆಕೆ ಉತ್ಸುಕಳಾಗುತ್ತಾಳೆ.

ತಾನು ಅಭ್ಯಾಸ ಮಾಡುವ ಗುರುಕುಲದ ಶಿಕ್ಷಕರೊಂದಿಗೆ ಆಕೆ ಕಮಲದ ಪುಷ್ಪದ ಬಗ್ಗೆ ಚರ್ಚೆ ಮಾಡುತ್ತಾಳೆ. ಆಕೆಯ ಆಸಕ್ತಿ ಕಂಡ ಶಿಕ್ಷಕಿ ಕಮಲದ ಪುಷ್ಪದ ಬಗ್ಗೆ ಒಂದೊಂದೇ ಮಾಹಿತಿ ನೀಡುತ್ತಾ ಹೋಗುತ್ತಾಳೆ. ಪ್ರಾರಂಭದಿಂದ ಅಂತ್ಯದವರೆಗೂ ಪದ್ಮಗಂಧಿ(ಕಮಲ)ಯೇ ಇದ್ದು, ಆಯುರ್ವೇದ ಚಿಕಿತ್ಸೆ, ಪ್ರಾಚೀನ ದೈವಿಕ ಗಂಧ ಮೆತ್ತಿಕೊಂಡಿರುವ ಕಮಲದ ಹೂವು, ದೈವಿಕ ಸೌಗಂಧ ಸ್ಪುರಿಸುವ ಕಮಲ ಪುಷ್ಪದ ಬಗ್ಗೆ ಆಳವಾಗಿ ಅರಿವಿನ ಪರಧಿಯನ್ನು ವಿಸ್ತರಿಸಿಕೊಳ್ಳುತ್ತ, ಅದರ ಅಗಾಧತೆ, ಆಳ, ಪ್ರತಿ ಸ್ಪರ್ಶದ ಗುಣ, ಸತ್ವ ಗುಣ ಸಿನಿಮಾದುದ್ದಕ್ಕೂ ಕಂಡು ಬರುತಗತದೆ. ಕಮಲ ಪುಷ್ಪದ ವೈವಿಧ್ಯಮಯ ಪಾತ್ರವನ್ನು ಶೋಧಿಸಿ ಜನರಿಗೆ ಅದರ ಮಹತ್ವವನ್ನು ಸೆರೆಹಿಡಿದು ಈ ಚಿತ್ರದ ಮೂಲಕ ತೋರಿಸುವ ಪ್ರಯತ್ನ ನಿರ್ದೇಶಕರಿಂದ ನಡೆದಿದೆ. ಬಾಲ ಕಲಾವಿದೆ ಮಹಾಪದ್ಮ ಚಿತ್ರದ ನಾಯಕಿ. ಆಕೆಯ ನಟನೆ ನೋಡುಗರನ್ನು ಸೆಳೆಯುತ್ತದೆ. ಗುರುಗಳ ಶಿಸ್ತು, ಜ್ಞಾನ, ಮಕ್ಕಳ ಕಲಿಕೆಗೆ ಪೂರಕ ವಾತಾವರಣ, ಹಳೆಯ ಕಾಲದ ಶಿಕ್ಷಣ ಪದ್ದತಿಯನ್ನು ಸುಂದರವಾಗಿ ಚಿತ್ರಿಸಲಾಗಿದೆ. ಚಿತ್ರದ ಕ್ಯಾಮೆರಾ ವರ್ಕ್, ಸಂಗೀತ, ಹಾಡುಗಳು ಹೊಸ ಲೋಕಕ್ಕೆ ಕರೆದೊಯ್ಯುತ್ತದೆ.
ಸಾಹಿತ್ಯ, ವಾಸ್ತು ಶಿಲ್ಪ, ಮಂತ್ರ ಚಿಕಿತ್ಸೆಯ ಮೂಲಕ ಮಾನವನ ದೇಹದ ಚೇತರಿಕೆಯಲ್ಲಿ ಕಮಲದ ಹೂವಿಗಿರುವ ಮನುಷ್ಯ ಸಂಬಂಧ ಮತ್ತು ದೈವಿಕ ಸಂಬಂಧವನ್ನು ಹಲವಾರು ರೀತಿಯಲ್ಲಿ ವಿವರಿಸಿದ್ದಾರೆ. ಕುಮಾರಿ ಮಹಾಪದ್ಮ ಲಗುರುಕುಲದ ವಿದ್ಯಾರ್ಥಿನಿಯಾಗಿದ್ದು, ತನಗಿರುವ ಕಲಿಕಾ ಆಸಕ್ತಿ ಚಿತ್ರದ ಸನ್ನಿವೇಶಗಳಲ್ಲಿ ನೋಡುಗರನ್ನು ಸೆಳೆಯುತ್ತದೆ. ಗುರುಮಾತೆಯ ಪಾತ್ರದಲ್ಲಿ ಉಡುಪಿಯ ಪರಿಪೂರ್ಣ ಚಂದ್ರಶೇಖರ್, ಡಾ.ಆರ್. ಗಣೇಶ್, ಡಾ.ಗೌರಿ ಸುಬ್ರಹ್ಮಣ್ಯ, ಡಾ. ಪ್ರೇಮಾ, ಡಾ. ಹೇಮಂತ್ ಕುಮಾರ್, ಆಚಾರ್ಯ ಮೃತ್ಯುಂಜಯ ಶಾಸ್ತ್ರಿ, ಜಿ.ಎಲ್. ಭಟ್ (ಶಿಲ್ಪಜ್ಞ), ಪಂಡಿತ ಪ್ರಸನ್ನ ವೈದ್ಯ, ದೀಪಕ್ ಪರಮಶಿವನ್ ತಂತಮ್ಮಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಈ ಚಿತ್ರವನ್ನು ಸುಚಿತ್ ಫಿಲಂಸ್ ಮೂಲಕ ವೆಂಕಟ್ ಗೌಡ ಅವರು ರಿಲೀಸ್ ಮಾಡಿದ್ದಾರೆ.