1
1
ಕೆ.ಮುನೀಂದ್ರ ಅವರ ಎಂ.ಪಿ. ಫಿಲಂಸ್ ವಿತರಣೆಯ ಮೊದಲ ಚಿತ್ರವೇ ಸೂಪರ್ ಸಕ್ಸಸ್ !
ಕಲ್ಲೂರ್ ಸಿನಿಮಾಸ್, ಪೆನ್ ಎನ್. ಪೇಪರ್ ಸ್ಟುಡಿಯೋಸ್ ಹಾಗೂ ಸ್ಕ್ರೀನ್ ಫಸ್ಟ್ ಪ್ರೊಡಕ್ಷನ್ ಲಾಂಛನದಲ್ಲಿ ಪ್ರಶಾಂತ್ ಕಲ್ಲೂರ್ ಅವರ ನಿರ್ಮಾಣದ, ಕೆ.ಮುನೀಂದ್ರ ಅವರ ಎಂಪಿ.ಫಿಲಂಸ್ ಮೂಲಕ ರಾಜ್ಯಾದ್ಯಂತ ರಿಲೀಸ್ ಆಗಿರುವ “congratulations ಬ್ರದರ್” ಚಿತ್ರ ಇದೀಗ ರಾಜ್ಯದ ಯುವಜನತೆಯ ಮನಗೆದ್ದು, ಎರಡನೇ ವಾರದಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಖುಷಿಯನ್ನು ಹಂಚಿಕೊಳ್ಳಲು ಆಯೋಜಿಸಲಾಗಿದ್ದ ಸಕ್ಸಸ್ ಮೀಟ್ ನಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.
ಈ ಚಿತ್ರಕ್ಕೆ ಪ್ರತಾಪ್ ಗಂಧರ್ವ ಆಕ್ಷನ್ ಕಟ್ ಹೇಳಿದ್ದರು. ನಿರ್ದೇಶಕ ಹರಿ ಸಂತೋಷ್ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಹಾಗೂ ಯುವ ನಟ ರಕ್ಷಿತ್ ನಾಗ್ ನಾಯಕನಾಗಿ ಹಾಗೂ ಸಂಜನ್ ದಾಸ್, ಅನುಷಾ ನಾಯಕಿಯರಾಗಿ ನಟಿಸಿರುವ ಚಿತ್ರ ಇದಾಗಿದೆ.
ನಿರ್ಮಾಪಕ ಪ್ರಶಾಂತ್ ಕಲ್ಲೂರ್ ಮಾತನಾಡುತ್ತ ನಾನು ಸದ್ಯಕ್ಕೆ ಚಿತ್ರ ನಿರ್ಮಾಣ ಮಾಡಬೇಕೆಂದುಕೊಂಡಿರಲಿಲ್ಲ. ಆದರೆ ಹರಿ ಸಂತೋಷ್ ಅವರು ನನ್ನ ಬಿಡಲಿಲ್ಲ. ಆನಂತರ ನಾನು ಈ ತಂಡದ ಜೊತೆಗೆ ನಿಂತೆ. ಹರಿ ಸಂತೋಷ್ ಕ್ರಿಯೇಟಿವ್ ಹೆಡ್ ಆಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಎರಡನೇ ವಾರದಲ್ಲೂ ಜನ ನಮ್ಮ ಚಿತ್ರವನ್ನು ಇಷ್ಟಪಟ್ಟು ನೋಡುತ್ತಿದ್ದಾರೆ. ಇತ್ತೀಚಿಗೆ ನನ್ನ ಕುಟುಂಬದವರ ಜೊತೆಗೆ ಹೋಗಿ ಚಿತ್ರ ವೀಕ್ಷಿಸಿದೆ. ಸಿನಿಮಾ ನೋಡಿದ ನನ್ನ ಅಪ್ಪ ಬೆನ್ನು ತಟ್ಟಿದರು. ನನಗೆ ಸಿಕ್ಕ. ನಿಜವಾದ ಗೆಲುವು ಅದು. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯಿಂದ ಎರಡು ವರ್ಷಗಳಿಗೆ ಮೂರು ಸಿನಿಮಾ ಮಾಡುವ ಯೋಜನೆ ಇದೆ ಎಂದರು.

ನಾನು ಕೆಲಸವನ್ನು ಬಹಳ ಇಷ್ಟ ಪಡುವವನು. ನನಗೆ ಸಿಕ್ಕಿರುವ ತಂಡವೂ ಹಾಗೆ ಇದೆ. ಎಲ್ಲರೂ ಈ ಸಿನಿಮಾಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಬಿಡುಗಡೆ ಪೂರ್ವದಲ್ಲಿ ರಾಜ್ಯದ 24 ಜಿಲ್ಲೆಗಳಿಗೂ ನಮ್ಮ ಜೊತೆಗೆ ಭೇಟಿ ನೀಡಿದ್ದಾರೆ. ಹಾಗಾಗಿ ಈ ಚಿತ್ರ ಕರ್ನಾಟಕದ ಜನರನ್ನು ತಲುಪಿದೆ. ನಿರ್ಮಾಪಕ ಪ್ರಶಾಂತ್ ಕಲ್ಲೂರ್, ನ್ಯೂಸ್ ಫಸ್ಟ್ ರವಿಕುಮಾರ್ ಹಾಗೂ ಹರೀಶ್ ರೆಡ್ಡಿ ಅವರ ಸಹಕಾರ ಅಪಾರ. ನಮ್ಮ ಚಿತ್ರ ನೋಡಿದ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಬೇರೆ ಚಿತ್ರಗಳಲ್ಲಿ ಅವಕಾಶ ಸಿಕ್ಕಿದೆ. ಇದಕ್ಕಿಂತ ಖುಷಿ ಬೇರೆ ಏನು ಬೇಕು ಎಂದರು ಕ್ರಿಯೇಟಿವ್ ಹೆಡ್ ಹರಿ ಸಂತೋಷ್.
ವಿತರಕ ಕೆ.ಮುನೀಂದ್ರ ಮಾತನಾಡುತ್ತ ನಮ್ಮ ಎಂಪಿ ಫಿಲಂಸ್ ಮೂಲಕ ರಿಲೀಸ್ ಮಾಡಿದ ಮೊದಲ ಚಿತ್ರವೇ ಯಶಸ್ವಿ ಪ್ರದರ್ಶನ ಕಾಣುತ್ತಿರುವುದು ಖುಷಿಯಾಗಿದೆ. ನಮ್ಮ ಬಳಿ ಬರೋ ಯಾವುದೇ ನಿರ್ಮಾಪಕರಿಗೆ ಹೆಚ್ಚಿನ ಹೊರೆಯಾಗದಂತೆ ಒಳ್ಳೊಳ್ಳೆ ಥೇಟರ್ ಗಳಲ್ಲಿ ಸಿನಿಮಾ ರಿಲೀಸ್ ಮಾಡಿ ಕೊಡುತ್ತೇವೆ ಎಂದು ಹೇಳಿದರು.

ನಿರ್ದೇಶಕ ಪ್ರತಾಪ್ ಗಂಧರ್ವ ಮಾತನಾಡುತ್ತ ಸೀರಿಯಲ್ ಡೈರೆಕ್ಟರ್ ಸಿನಿಮಾನ ಹೇಗೆ ಮಾಡಿರಬಹುದೇನೋ ಎಂಬ ಭಾವನೆ ಹಲವರಲ್ಲಿತ್ತು. ಆದರೆ ಸಿನಿಮಾ ನೋಡಿ ಮೇಲೆ ಧಾರಾವಾಹಿಯ ಛಾಯೆ ಇದರಲ್ಲಿಲ್ಲ ಎಂದು ಹೇಳಿದ್ದಾರೆ. ನನ್ನನ್ನು ನಂಬಿ ಬಂಡವಾಳ ಹಾಕಿದ ನಿರ್ಮಾಪಕರಿಗೆ, ತಾನೊಬ್ಬ ನಿರ್ದೇಶಕನಾಗಿದ್ದರೂ, ನನಗೆ ನಿರ್ದೇಶನದಲ್ಲಿ ಪೂರ್ಣ ಸ್ವಾತಂತ್ರ್ಯ ನೀಡಿದ ಹರಿ ಸಂತೋಷ್ ಅವರಿಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದ ಎಂದು ಹೇಳಿದರು.
ಈ ಚಿತ್ರದಲ್ಲಿ ನಟಿಸಿದ ಮೇಲೆ ನನಗೆ ಎರಡು ಮೂರು ಚಿತ್ರಗಳಲ್ಲಿ ನಟಿಸುವ ಅವಾಕಾಶ ಬಂದಿದೆ. ಇದು ಸಾಧ್ಯವಾಗಿದ್ದು ಈ ಚಿತ್ರದ ನಿರ್ಮಾಪಕರು ಹಾಗೂ ಹರಿ ಸಂತೋಷ್ ಅವರಿಂದ ಎಂದು ನಾಯಕ ರಕ್ಷಿತ್ ನಾಗ್ ಹೇಳಿದರು. ನಾಯಕಿಯರಾದ ಸಂಜನ ದಾಸ್, ಅನೂಷ ಹಾಗೂ ಚಿತ್ರದಲ್ಲಿ ನಟಿಸಿರುವ ಸುದರ್ಶನ್, ಚೇತನ್ ದುರ್ಗ ಸೇರಿದಂತೆ ಚಿತ್ರತಂಡದ ಸದಸ್ಯರು ಯಶಸ್ಸಿನ ಖುಷಿಯನ್ನು ಮಾತುಗಳ ಮೂಲಕ ಹಂಚಿಕೊಂಡರು.