Popular Posts

ಉತ್ತರ ಕರ್ನಾಟಕದಲ್ಲಿ ಮಾರುತ ಚಿತ್ರದ ವಿಜಯ ಯಾತ್ರೆ

ಹುಬ್ಬಳ್ಳಿ: ಖ್ಯಾತ ನಿರ್ದೇಶಕ ಎಸ್. ನಾರಾಯಣ ಅವರು ಕಥೆ, ಚಿತ್ರಕಥೆ ಬರೆದು ಸಂಗೀತ ಸಂಯೋಜನೆಯ ಜತೆಗೆ ನಿರ್ದೇಶನ ಮಾಡಿರುವ ಮಾರುತ ಕನ್ನಡ ಸಿನಿಮಾ ಈಗಾಗಲೇ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಕುರಿತು ಸೋಮವಾರ ನಿರ್ದೆಶಕ ಎಸ್. ನಾರಾಯಣ್ ಅವರು ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಸಾಮಾಜಿಕ ಜಾಲತಾಣಗಳು ಎಲ್ಲರಿಗೂ ಬಹಳ ಮುಖ್ಯವಾಗಿವೆ. ಇವುಗಳ ಬಳಿಕೆಯಲ್ಲಿ ಸ್ವಲ್ಪ ಎಚ್ಚರಿಕೆ ತಪ್ಪಿದರೆ, ಏನೆಲ್ಲ ಅನಾಹುತಗಳು ನಡೆಯುತ್ತವೆ ಎಂಬ ಸಾಮಾಜಿಕ ಕಳಕಳಿಯುಳ್ಳ ಸಿನಿಮಾ ನಿರ್ಮಾಣ ಮಾಡಿದ್ದೇವೆ. ಪ್ರೇಕ್ಷಕರ ಮೆಚ್ಚುಗೆಗೆ ನಮ್ಮ ಸಿನಿಮಾ ಪಾತ್ರವಾಗಿದ್ದು, ಇನ್ನೂ ಹೆಚ್ಚು ಜನರು ಸಿನಿಮಾ ವೀಕ್ಷಿಸಿ ತಮ್ಮ ಮಕ್ಕಳ ಬಗ್ಗೆ ಜಾಗೃತರಾಗಿರಲಿ ಎಂದು ಮನವಿ ಮಾಡಿದರು.

ಸಿನಿಮಾದ ಮುಖ್ಯ ಪಾತ್ರದಲ್ಲಿ ಶ್ರೇಯಸ್ ಕೆ. ಮಂಜು, ನಟ ದುನಿಯಾ ವಿಜಯ, ಬೃಂದಾ ಆಚಾರ್ಯ ಕಾಣಿಸಿಕೊಂಡಿದ್ದಾರೆ. ವಿಶೇಷ ಪಾತ್ರದಲ್ಲಿ ರವಿಚಂದ್ರನ್, ಉಳಿದಂತೆ ಸಾಧು ಕೋಕಿಲ್, ನಿಶ್ವಿಕಾ ನಾಯ್ಡು, ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಮಂಜು ಪಾವಗಡ, ಚಿತ್ರಾ ಶೆಣೈ, ಸುಜಯ್ ಶಾಸ್ತ್ರಿ ಸೇರಿದಂತೆ ದೊಡ್ಡ ತಾರಾಬಳಗವಿದೆ ಎಂದು ತಿಳಿಸಿದರು.

ನಿರ್ಮಾಪಕ ರಮೇಶ ಯಾದವ್, ಛಾಯಾಗ್ರಹಣ ಪಿ.ಕೆ. ಹೆಚ್.ದಾಸ್, ಸಂಕಲನ ಶಿವಪ್ರಸಾದ್ ಯಾದವ್, ವಿನೋದ ಹಾಗೂ ಅರ್ಜುನ ಸಾಹಸ ನಿರ್ದೇಶನ ಹಾಗೂ ಮೋಹನ್ ಕುಮಾರ್, ಸಂತು ನೃತ್ಯ ನಿರ್ದೇಶನ ಮಾಡಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು, ಧಾರವಾಡದ ಅಣ್ಣಿಗೇರಿ, ಕೂಡಲಸಂಗಮ ಹಾಗೂ ಸವದತ್ತಿಯಲ್ಲಿ ‌ಚಿತ್ರದ ಚಿತ್ರೀಕರ ಮಾಡಲಾಗಿದೆ ಎಂದು ಹೇಳಿದರು.

ಕನ್ನಡ ಚಿತ್ರ ರಂಗ ಎಲ್ಲವನ್ನೂ ಮೀರಿ ಬೆಳೆದಿದೆ. ಇಲ್ಲಿಯ ತಂತ್ರಜ್ಞರಿಗೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಬೇಡಿಕೆ ಇದೆ. ಒಳ್ಳೆಯ ಸಂದೇಶವಿರುವ ಸಿನಿಮಾಗಳನ್ನು ಕನ್ನಡ ಚಿತ್ರರಂಗ ನೀಡುತ್ತಿದೆ ಎಂದರು.

ನಾಯಕ ನಟ ಶ್ರೇಯಸ್ ಮಂಜು ಮಾತನಾಡಿ, ಮಾರುತ ಸಿನಿಮಾ ಕಮರ್ಷಿಯಲ್, ಮನರಂಜನೆ ಹಾಗೂ ಸಾಮಾಜಿಕ ಕಳಕಳಿಯನ್ನು ಹೊಂದಿದ್ದು, ನಮ್ಮ ಸಿನಿಮಾ ಮೂಲಕ ಪ್ರಸ್ತುತ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ರಮೇಶ ಯಾದವ್ ಅವರೂ ಜತೆಗಿದ್ದರು.

Leave a Reply

Your email address will not be published. Required fields are marked *