1
1
ನೀನಾಸಂ ಪ್ರತಿಭೆ ರಘು ರಾಜ ನಂದ ಮೊದಲಬಾರಿಗೆ ನಾಯಕನಾಗಿ ನಟಿಸಿರುವ, ಮಹಾಕಾಳಿಯ ಪ್ರಭಾವದ ಜತೆ ತಂದೆ ಮಗನ ಕಥೆ ಹೊಂದಿರುವ ಚಿತ್ ರೋಣ ನ.7ರಂದು ತೆರೆಗೆ ಬರಲು ಸಿದ್ದವಾಗಿದೆ. ರೋಣ ಎಂಬ ಊರಲ್ಲಿ ನಡೆಯೋ ಕಾಳಿಕಾಮಾತೆಯ ಜಾತ್ರೆ ಮತ್ತು ಅದರ ಸುತ್ತ ನಡೆಯುವ ಘಟನೆಗಳನ್ನು ಇಟ್ಟುಕೊಂಡು ಯುವ ನಿರ್ದೇಶಕ ಸತೀಶ್‌ಕುಮಾರ್ ಅವರು ರೋಣ ಚಿತ್ರಕ್ಕೆ ಮೊದಲಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ, ಇತ್ತೀಚೆಗೆ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ನೆರವೇರಿತು, ಸಿಎಂ ಮಾಧ್ಯಮ ಸಲಹೆಗಾರಾದ ಪ್ರಭಾಕರ್ ಅವರು ಟ್ರೈಲರ್ ಲಾಂಚ್ ಮಾಡಿ ಶುಭ ಹಾರೈಸಿದರು.

ತಂದೆ ಮಗನ ಬಾಂಧವ್ಯದ ಕಥೆಯನ್ನು ಒಳಗೊಂಡ ರೋಣ ಚಿತ್ರವನ್ನು ಬಿ.ಕೆ.ಆರ್. ಪ್ರೊಡಕ್ಷನ್ ಬ್ಯಾನರ್ ಅಡಿ ನಾಯಕ ರಘು ರಾಜ ನಂದ ಅವರೇ ನಿರ್ಮಾಣ ಮಾಡಿದ್ದಾರೆ, ಕನ್ನಡ ಪಿಕ್ಚರ್ ನ ಪ್ರವೀಣ ಏಕಾಂತ ಅರ್ಪಿಸುವ ಈ ಚಿತ್ರದಲ್ಲಿ ಯುವನಟ ರಘು ರಾಜ ನಂದ ಹಾಗೂ ಪ್ರಕೃತಿ ಪ್ರಸಾದ್ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. “ಯಾವುದೇ ಜಾಗ ಆಗಲಿ, ನಾನು ಇದ್ರೂ ನನ್ನ ಮಗನೇ ಹೀರೋ, ನಾನಿಲ್ದೇ ಹೋದ್ರೂ ನನ್ನ ಮಗನೇ ಹೀರೋ” ಎಂದು ನಾಯಕನ ತಂದೆಯಾಗಿ ಶರತ್ ಲೋಹಿತಾಶ್ವ ಹೇಳುವ ಡೈಲಾಗ್ ಒಳಗೊಂಡ ಈ ಟ್ರೈಲರ್‌ನಲ್ಲಿ ಕಾಳಿಕಾಂಬೆ ಹಾಗೂ ಜಾತ್ರೆಯ ಕಂಟೆಂಟ್, ತಂದೆ ಮಗನ ಜತೆಗೆ ನಾಯಕನ ಆಕ್ಷನ್ ಸೀನ್ ಪ್ರಮುಖವಾಗಿದ್ದು ಕುತೂಹಲ ಕೆರಳಿಸುತ್ತದೆ, ರಂಗಕಮಿ, ಕಿರುತೆರೆ, ಅಲ್ಲದೆ ಕೆರೆಬೇಟೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಹಕಲಾವಿದನಾಗಿ ನಟಿಸಿರುವ ರಘುರಾಜನಂದ ಅವರು ರೋಣ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹೊಸಕೋಟೆ ಮೂಲದ ರಘು ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡು ನಟನೆಗಿಳಿದಿದ್ದಾರೆ.

ಊರಿನ ಜಾತ್ರೆ ರಾಜಕೀಯ ಹಾಗೂ ತಂದೆ-ಮಗನ ಸುತ್ತ ನಡೆಯುವ ಫ್ಯಾಮಿಲಿ ಡ್ರಾಮಾ ಕಥಾನಕ ಒಳಗೊಂಡ ಮನರಂಜನಾತ್ಮಕ ಚಿತ್ರ ಇದಾಗಿದೆ, ಕೆಲ ಸೀರಿಯಲ್‌ನಲ್ಲಿ ನಟಿಸಿರುವ ಪ್ರಕೃತಿ ಪ್ರಸಾದ್ ಅವರು ಈ ಚಿತ್ರದಲ್ಲಿ ಹಳ್ಳಿಯಿಂದ ನಗರಕ್ಕೆ ಹೋಗಿ ಓದಿಕೊಂಡು ನಂತರ ಹಳ್ಳಿಗೆ ಬಂದು ನಾಯಕನ ಜತೆ ಸೇರಿ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಹೋರಾಡುವ ಕಾವ್ಯ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ನಾಯಕನ ತಂದೆಯ ಪಾತ್ರವನ್ನು ಹಿರಿಯನಟ ಶರತ್ ಲೋಹಿತಾಶ್ವ ನಿರ್ವಹಿಸಿದ್ದಾರೆ.
ವೇದಿಕೆಯಲ್ಲಿ ನಿರ್ದೇಶಕ ಸತೀಶ್‌ಕುಮಾರ್ ಮಾತನಾಡಿ, ನಾನೀ ಸ್ಟೇಜ್ ಮೇಲೆ ನಿಂತಿರಲು ರಘುರಾಜನಂದ ಅವರೇ ಕಾರಣ, ಅವರಿಲ್ಲದಿದ್ರೆ ಈ ಸಿನಿಮಾ ಆಗ್ತಿರಲಿಲ್ಲ, ನನ ಸ್ನೇಹಿತ ರಮೇಶ್ ಹೇಳಿದ ಈ ಲೈನ್ ಇಟ್ಟುಕೊಂಡು ಆದಿ ಅವರು ತುಂಬಾ ಚೆನ್ನಾಗಿ ಚಿತ್ರಕಥೆ, ಡೈಲಾಗ್ ಬರೆದಿದ್ದಾರೆ, ಚಿತ್ರದ 13ನೇ ವರ್ಷನ್ ಫೈನಲ್ ಆಯಿತು, ಕಳೆದ 9 ವರ್ಷಗಳಿಂದ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದು, ಮೊದಲಬಾರಿಗೆ ಈ ಚಿತ್ರಕ್ಕೆ ಆಕ್ಷನ ಕಟ್ ಹೇಳಿದ್ದೇನೆ. ಎರಡು ವರ್ಷದ ಹಿಂದೆ ಶುರುವಾದ ಈ ಚಿತ್ರಕ್ಕೆ ಹೊಸಕೋಟೆಯ ಸುತ್ತಮುತ್ತ 60 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದವೆ, ಪೊಲಿಟಿಕಲ್ ಡ್ರಾಮಾ, ಸಾಮಾಜಿಕ ಕಳಕಳಿ, ಲವ್‌ಸ್ಟೋರಿ ಹೀಗೆ ಎಲ್ಲ ರೀತಿಯ ಮನರಂಜನಾತ್ಮಕ ಅಂಶಗಳೂ ಚಿತ್ರದಲ್ಲಿದೆ ಎಂದು ಹೇಳಿದರು.

ನಾಯಕ ರಘು ರಾಜ ಮಾತನಾಡಿ ಈ ಟ್ರೈಲರ್ ಹಿಂದೆ ದೊಡ್ಡ ಪರಿಶ್ರಮ ಅಡಗಿದೆ, ರಮೇಶ್ ಅವರು ಹೇಳಿದ ಒಂದು ಲೈನ್ ಬೆಳೆಸಿ ಚಿತ್ರ ಮಾಡಿದ್ದೇವೆ, ಚಿತ್ರದಲ್ಲಿ 4 ಸುಂದರ ಹಾಡುಗಳಿದ್ದು, ಗಗನ್ ಬಡೇರಿಯಾ ಬಿಜಿಎಂ ಮಾಡಿದ್ದಾರೆ, ಹೆಸರಾಂತ ಗಾಯಕ, ಗಾಯಕಿಯರೇ ನಮ್ಮ ಚಿತ್ರದಲ್ಲಿ ಹಾಡಿದ್ದಾರೆ, ರಂಗಭೂಮಿಯಲ್ಲಿ ಸಾಕಷ್ಟು ಕಲಿತ ನಂತರ ನಾನು ಕ್ಯಾಮೆರಾ ಎದುರಿಸಿದ್ದೇನೆ, ನಮ್ಮ ಚಿತ್ರದ ಟ್ರೈಲರನ್ನು ಸಿ.ಎಂ. ಸಿದ್ದರಾಮಯ್ಯ ಅವರಿಗೆ ತೋರಿಸಿದಾಗ ಅದನ್ನು ನೋಡಿ ಖುಷಿಪಟ್ಟರು, ಅಲ್ಲದೆ ಇದರಲ್ಲಿ ಆಕ್ಟ್ ಮಾಡಿರೋದು ನೀನೇನಾ, ಚೆನ್ನಾಗಿ ಅಭಿನಯಿಸಿದ್ದೀಯಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಒಬ್ಬ ಪ್ರಾಮಾಣಿಕ ಪತ್ರಕರ್ತನಿಂದ ಹಳ್ಳಿ ಹೇಗೆ ಡೆವಲಪ್ ಆಗುತ್ತೆ ಎಂದು ಚಿತ್ರದಲ್ಲಿ ತೋರಿಸಿದ್ದೇವೆ ಎಂದು ಹೇಳಿದರು,