1
1
*ಅಮೃತಾ ಸಿನಿಕ್ರಾಫ್ಟ್ ಅಡಿ ವಿಜಯ್ ಟಾಟಾ ಹಾಗೂ ಅಮೃತಾ ವಿಜಯ್ ಟಾಟಾ ನಿರ್ಮಾಣ…
ಇತ್ತೀಚೆಗಷ್ಟೇ ಯುವ ಕಲಾವಿದರನ್ನೇ ಹಾಕಿಕೊಂಡು ಮನದ ಕಡಲು ಚಿತ್ರ ನಿರ್ದೇಶಿಸಿದ್ದ ಯೋಗರಾಜ ಭಟ್ಟರು, ಇದೀಗ ನಟ ಭುವನ್ ಪೊನ್ನಣ್ಣ ಜತೆ ಸೇರಿ ಸದ್ದಿಲ್ಲದೆ ಮತ್ತೊಂದು ಸಿನಿಮಾ ಪ್ರಾರಂಭಿಸಿದ್ದಾರೆ. ಆ ಚಿತ್ರದ ಹೆಸರು ಹಲೋ 123. ಈಗಾಗಲೇ ಒಂದೇ ವೇದಿಕೆಯಲ್ಲಿ ಒಟ್ಟಿಗೆ ಆರು ಚಿತ್ರಗಳನ್ನು ನಿರ್ಮಿಸುವುದಾಗಿ ಘೋಷಿಸಿ, 6 ಚಿತ್ರಗಳಿಗೂ ಚಾಲನೆ ನೀಡಿದ್ದ ನಿರ್ಮಾಪಕ ವಿಜಯ ಟಾಟಾ ಅವರು ತಾವು ಹೇಳಿದಂತೆ ಒಂದೆರಡು ಚಿತ್ರಗಳನ್ನು ಈಗಾಗಲೇ ಪ್ರಾರಂಭಿಸಿದ್ದಾರೆ. ಅದರ ಮುಂದುವರಿದ ಭಾಗವಾಗಿ ಇದೀಗ ಹಲೋ 123 ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.

ಈ ಹಿಂದೆ ರಾಂಧವ ಚಿತ್ರ ನಿರ್ದೇಶಿಸಿ ಭರವಸೆ ಮೂಡಿಸಿದ್ದ ಯುವನಟ ಭುವನ್ ಪೊನ್ನಣ್ಣ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದು, ಇದೇ ಮೊದಲಬಾರಿಗೆ ನಿರ್ದೇಶಕ ಯೋಗರಾಜ್ ಭಟ್ ಅವರೊಂದಿಗೆ ಕೈಜೋಡಿಸಿದ್ದಾರೆ. ಹಲೋ 123 ಒಂದು ವಿಶೇಷ _ಕಾನ್ಸೆಪ್ಟ್ ಒಳಗೊಂಡ ಚಿತ್ರವಾಗಿದ್ದು ಇದರ ಕಥೆ, ಚಿತ್ರಕಥೆ ರಚಿಸಿ ನಿರ್ದೇಶನದ ಜವಾಬ್ದಾರಿಯನ್ನು ಯೋಗರಾಜ ಭಟ್ಟರು ವಹಿಸಿಕೊಂಡಿದ್ದಾರೆ. ಅವರ ಜತೆ ವಿ.ಹರಿಕೃಷ್ಣ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.
ಕಳೆದವಾರ ನಿರ್ಮಾಪಕ ವಿಜಯ್ ಟಾಟಾ ಅವರ ಮನೆಯಲ್ಲಿ ಹಲೋ 123 ಚಿತ್ರದ ಅಧಿಕೃತ ಸ್ಕ್ರಿಪ್ಟ್ ಪೂಜೆ ಹಾಗೂ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ನೆರವೇರಿತು. ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ದಂಪತಿಯ ಪುತ್ರಿ ಬೇಬಿ ತ್ರಿದೇವಿಯ ಅಮೃತ ಹಸ್ತದಿಂದ, ಹಲೋ 123 ಚಿತ್ರಕ್ಕೆ ಚಾಲನೆ ನೀಡಲಾಯಿತು. ಚಿತ್ರದ ನಾಯಕ ಭುವನ್, ನಿರ್ದೇಶಕ ಯೋಗರಾಜ್ ಭಟ್, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಹಾಗೂ ನಿರ್ಮಾಪಕರಾದ ವಿಜಯ್ ಟಾಟಾ, ಅಮೃತಾ ವಿಜಯ್ ಟಾಟಾ ಅವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ನೂತನ ಚಿತ್ರದ ಕುರಿತಂತೆ ಮಾಹಿತಿ ಹಂಚಿಕೊಂಡರು.
ಸದ್ಯ ಯೋಗರಾಜ್ ಭಟ್ಟರು ಯು.ಎಸ್. ಪ್ರವಾಸಕ್ಕೆ ಹೊರಟಿದ್ದು, ಅಲ್ಲಿಂದ ವಾಪಸಾದ ನಂತರ ಹಲೋ 123 ಚಿತ್ರದ ಉಳಿದ ಕೆಲಸಗಳು ಶುರುವಾಗಲಿದೆ, ಬರುವ ಅಕ್ಟೋಬರ್ನಲ್ಲಿ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ. ಸದ್ಯದಲ್ಲೇ ನಾಯಕಿ ಸೇರಿದಂತೆ ಉಳಿದ ಕಲಾವಿದರ ಹಾಗೂ ತಾತ್ರಿಕರ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಚಿತ್ರದ ನಿರ್ಮಾಪಕರು ತಿಳಿಸಿದ್ದಾರೆ.