1
1
ಇದು ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ…
ದೊಡ್ಡ ಮೊತ್ತಕ್ಕೆ ಆನಂದ್ ಆಡಿಯೋ ತೆಕ್ಕೆಗೆ ಮ್ಯೂಸಿಕ್ ರೈಟ್ಸ್ !
ಸ್ಯಾಂಡಲ್ ವುಡ್ ಸಲಗ ವಿಜಯ್ ಕುಮಾರ್ ಅಭಿನಯದ, ಕಾಟೇರ ಕಥೆಗಾರ ಜಡೇಶ ಕೆ. ಹಂಪಿ ಅವರ ನಿರ್ದೇಶನದ ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ ಲ್ಯಾಂಡ್ ಲಾರ್ಡ್. ಸಾರಥಿ ಫಿಲಂಸ್ ಬ್ಯಾನರ್ ಅಡಿ ಹೇಮಂತ್ ಗೌಡ ಕೆ.ಎಸ್. ಹಾಗೂ ಕೆ.ವಿ. ಸತ್ಯಪ್ರಕಾಶ್ ಅವರುಗಳು ಈ ಚಿತ್ರವನ್ನು ಬಿಗ್ ಬಜೆಟ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.
ಈ ಚಿತ್ರದಲ್ಲಿ ವಿಜಯ್ ಕುಮಾರ್ ಅವರ ಹಿರಿಯ ಮಗಳು ರಿತನ್ಯ ವಿಜಯ್ ಮೊದಲಬಾರಿಗೆ ಅದೂ ತಂದೆಯ ಜತೆ ತೆರೆ ಹಂಚಿಕೊಳ್ಳುತ್ತಿರೋದು ವಿಶೇಷ. ಬೆಡಗಿ ರಚಿತಾರಾಮ್ ಈ ಚಿತ್ರದಲ್ಲಿ ವಿಜಯ್ ಅವರ ಜತೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಸೆಟ್ಟೇರಿದಾಗಿಂದಲೂ ದೊಡ್ಡಮಟ್ಟದಲ್ಲಿ ಸದ್ದು, ಸುದ್ದಿ ಮಾಡುತ್ತಲೇ ಬಂದಿರುವ ಈ ಚಿತ್ರದ ಬಹುತೇಕ ಚಿತ್ರೀಕರಣ ಕೆಲಸ ಮುಗಿದಿದ್ದು, ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗಿದೆ. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಈ ಚಿತ್ರತಂಡ ಸಂತಸದ ಸುದ್ದಿಯೊಂದನ್ನ ಹಂಚಿಕೊಂಡಿದೆ.
ಆನಂದ್ ಆಡಿಯೋ ಕಂಪನಿ ‘ಲ್ಯಾಂಡ್ ಲಾರ್ಡ್’ ಚಿತ್ರದ ಆಡಿಯೋ ಹಕ್ಕುಗಳನ್ನ ದಾಖಲೆಯ ಬೆಲೆಗೆ ಖರೀದಿಸಿದೆ. ಆ ವಿಚಾರವನ್ನ ಚಿತ್ರತಂಡ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ವಿಶೇಷವಾಗಿ ಹಂಚಿಕೊಂಡಿದೆ.
ಆನಂದ್ ಆಡಿಯೋ ಪಾಲಿಗಿದು ಲಕ್ಕಿ ಮತ್ತು ಹಿಟ್ ಕಾಂಬಿನೇಷಶನ್ ಎನ್ನಬಹುದು. ವಿಜಯ್ ಕುಮಾರ್ ಅವರ ಸಿನಿಮಾಗಳು ಆನಂದ್ ಆಡಿಯೋ ಕಂಪನಿಗೆ ಒಳ್ಳೆಯ ವ್ಯಾಪಾರವನ್ನ ಮಾಡಿಕೊಟ್ಟಿವೆ. ಅದೇ ರೀತಿ ಸಂಗೀತ ನಿರ್ದೇಶಕ ಅಜನೀಶ್ ಬಿ. ಲೋಕನಾಥ್ ಹಾಗೂ ಜಡೇಶ ಕೆ. ಹಂಪಿ ಅವರ ಕಾಂಬಿನೇಶನ್ ಸಿನಿಮಾಗಳು ಆನಂದ್ ಆಡಿಯೋ ಆಯ್ಕೆಯ ಯಶಸ್ವಿ ಸಿನಿಮಾಗಳಾಗಿವೆ. ಹಾಗಾಗಿ ಆನಂದ್ ಆಡಿಯೋ ಕಂಪನಿ ಲ್ಯಾಂಡ್ ಲಾರ್ಡ್ ಚಿತ್ರದ ಆಡಿಯೋ ಹಕ್ಕನ್ನ ದೊಡ್ಡ ಮೊತ್ತ ಕೊಟ್ಟು ಖರೀದಿಸಿದೆ. ಈ ಆಲ್ಬಂ ತುಂಬಾ ವಿಶೇಷತೆಗಳಿಂದ ಕೂಡಿದ್ದು, ಹಾಡುಗಳು ಕೇಳುಗರ ಮನಸನ್ನು ಗೆಲ್ಲಲಿವೆ ಎಂಬುದು ಚಿತ್ರತಂಡದ ಅಭಿಪ್ರಾಯ.
ಹಿನ್ನೆಲೆ ಸಂಗೀತವೂ ಚಿತ್ರದ ಹೈಲೈಟ್ ಗಳಲ್ಲಿ ಒಂದಾಗಿರಲಿದೆಯಂತೆ. ಲ್ಯಾಂಡ್ ಲಾರ್ಡ್ ಚಿತ್ರದಲ್ಲಿ ರಿತನ್ಯ ವಿಜಯ್, ರಚಿತಾರಾಮ್ ಜತೆ ಇನ್ನೂ ರಿವೀಲ್ ಮಾಡದ ಅನೇಕ ಹಿರಿಯ ಕಲಾವಿದರು ಅಭಿನಯಿಸಿದ್ದಾರೆ. ಬಹು ದೊಡ್ಡ ತಾರಾಬಳಗ ಈ ಚಿತ್ರದಲ್ಲಿರಲಿದೆ ಎನ್ನಲಾಗುತ್ತಿದೆ. ಅಂದ್ಹಾಗೆ ಲ್ಯಾಂಡ್ ಲಾರ್ಡ್ ಚಿತ್ರ ಎಲ್ಲಾ ಅಂದುಕೊಂಡಂತೆಯೇ ಆದರೆ ದಸರಾ ಅಥವಾ ದೀಪಾವಳಿ ವೇಳೆಗೆ ಪ್ರೇಕ್ಷಕರ ಮುಂದೆ ಬರುವ ನಿರೀಕ್ಷೆಯಿದೆ.