1
1

Rating : *** (3/5)
ಬೆಂಕಿಪುರದ ವೀರಗಾಸೆ ಕುಟುಂಬದ ಸುತ್ತ ಹಾಗೂ ಆ ಊರ ಗೌಡನ ಅಟ್ಟಹಾಸವನ್ನು ಮಟ್ಟ ಹಾಕಲು, ದುಷ್ಟರ ಸಂಹಾರಕ್ಕಾಗಿ ಸಾಕ್ಷಾತ್ ವೀರಭದ್ರನೇ ಭೂಮಿಯಲ್ಲಿ ಅವತರಿಸುವ ಕಥೆ ಹೊತ್ತು ತಂದ ‘ರುದ್ರಾಭಿಷೇಕಂ’ ಚಿತ್ರ ಈವಾರ ತೆರೆಕಂಡಿದೆ, ವೀರಭದ್ರಸ್ವಾಮಿಗೆ ಪ್ರಿಯವಾದ ವೀರಗಾಸೆ ಕುಣಿತ ಸೇವೆಯನ್ನು ಅನಾದಿಕಾಲದಿಂದ ಮಾಡಿಕೊಂಡು ಬಂದಿದ್ದ ಬಸಯ್ಯ(ವಿಜಯ ರಾಘವೇಂದ್ರ) ಗೌಡ ಬೈರೇಗೌಡ(ಬಲ ರಾಜವಾಡಿ)ನ ಕುತಂತ್ರಕ್ಕೆ ಬಲಿಯಾಗಿ ಸಾವನ್ನಪ್ಪುತ್ತಾನೆ, ಗರ್ಭಿಣಿಯಾಗಿದ್ದ ಆತನ ಪತ್ನಿ ಶಿವಗಂಗಾ ಮಗುವಿಗೆ ಜನ್ಮನೀಡಿ ಪ್ರಾಣ ಬಿಡುತ್ತಾಳೆ, ಇದಾವುದೂ ತಿಳಿಯದೆ ಅಜ್ಜಿಯ ಆಸರೆಯಲ್ಲೇ ಬೆಳೆದ ವೀರಭದ್ರ, ಊರ ಜನರ ಪ್ರೀತಿ, ವಿಶ್ವಾಸ ಗಳಿಸಿರುತ್ತಾನೆ,
ಮನೆಯಲ್ಲೇ ಇದ್ದ ಅತ್ತೆ ಮಗಳು ಪೂರ್ವಿ(ಪ್ರಿಯಾಂಕ ತಿಮ್ಮೇಶ್)ಗೆ ವೀರಭದ್ರನೆಂದರೆ ತುಂಬಾ ಪ್ರೀತಿ, ಆತನಿಗೂ ಈಕೆಯ ಮೇಲೆ ಅಷ್ಟೇ ಪ್ರೀತಿಯಿರುತ್ತದೆ, ಇತ್ತ ಬೈರೇಗೌಡನ ಮಗ ಬೆಂಕಿ ಪುಡಾರಿಗಳ ಜತೆ ಸೇರಿ ಊರ ಮಹಿಳೆಯರಿಗೆ ಕಿರುಕುಳ ನೀಡುತ್ತಿರುತ್ತಾನೆ. ಈತನ ಕಾಟಕ್ಕೆ ಪವಿತ್ರ ಎಂಬ ಮುಗ್ಧಯುವತಿ ಬಲಿಯಾಗುತ್ತಾಳೆ, ಅಲ್ಲದೆ ಈ ದುಷ್ಟರ ಕಣ್ಣು ವೀರಭದ್ರನ ಮನೆಯಲ್ಲಿದ್ದ ಅತ್ತೆ ಮಗಳು ಪೂರ್ವಿ(ಪ್ರಿಯಾಂಕ ತಿಮ್ಮೇಶ್)ಯ ಮೇಲೂ ಬೀಳುತ್ತದೆ, ಇದೇ ಸಮಯದಲ್ಲಿ ಒಂದು ದುರ್ಘಟನೆ ನಡೆದು ಆ ಘಟನೆ ಚಿತ್ರಕಥೆಯ ದಿಕ್ಕನ್ನೇ ಬದಲಿಸುತ್ತದೆ, ಕಾಲದಲ್ಲಿ ಲೀನವಾಗಿದ್ದ ಹಲವು ಸತ್ಯಗಳೂ ಹೊರಬರುತ್ತವೆ, ಇಡೀ ಚಿತ್ರದ ಕಥೆ ನಡೆಯುವುದು ವೀರಭದ್ರನ ಒಕ್ಕಲಿನವರೇ ಹೆಚ್ಚಾಗಿರುವ ಬೆಂಕಿಪುರ ಎಂಬ ಕಾಲ್ಪನಿಕ ಹಳ್ಳಿಯಲ್ಲಿ, ಚಿತ್ರದ ಪ್ರತಿ ದೃಶ್ಯವೂ ಕುತೂಹಲ ಹುಟ್ಟುಹಾಕಿ ನೋಡಿಸಿಕೊಂಡು ಹೋಗುತ್ತದೆ, ಮಚ್ಚು ಲಾಂಗುಗಳ ಅಬ್ಬರವಿಲ್ಲದ ಒಂದು ನೀಟಾದ ಸಿನಿಮಾವನ್ನು ನಿರ್ದೇಶಕ ವಸಂತಕುಮಾರ್ ಕಟ್ಟಿಕೊಟ್ಟಿದ್ದಾರೆ, ಚಿತ್ರದ ಕೊನೇ ಮೂವತ್ತು ನಿಮಿಷ ಅದ್ಭುತವಾಗಿ ಮೂಡಿಬಂದಿದೆ. ಕೊನೆಯಲ್ಲಿ ಬರೋ ವೀರಭದ್ರನ ರೌದ್ರಾವತಾರ ಪ್ರೇಕ್ಷಕರಲ್ಲಿ ಭವ ಉಕ್ಕಿಸುತ್ತದೆ, ತಂದೆ ಮಗನಾಗಿ ವಿಜಯ ರಾಘವೇಂದ್ರ ಎರಡೂ ಪಾತ್ರಗಳನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ, ಕಾಲಜ್ಞಾನಿ ಲಿಂಗಯ್ಯನಾಗಿ ಸ್ವತ: ನಿರ್ದೇಶಕ ವಸಂತಕುಮಾರ್ ಅಭಿನಯಿಸಿದ್ದು ಆ ಪಾತ್ರಕ್ಕೆ ದೈವಕಳೆ ನೀಡಿದ್ದಾರೆ, ಇನ್ನು ಪೂರ್ವಿ, ಅಪೂರ್ವಿಯಾಗಿ ಎರಡೂ ಪಾತ್ರಗಳನ್ನು ನಾಯಕಿ ಪ್ರಿಯಾಂಕ ತಿಮ್ಮೇಶ್ ಸಮರ್ಥವಾಗಿ ನಿಭಾಯಿಸಿದ್ದಾರೆ, ಇದಲ್ಲದೆ ಮತ್ತೊಂದು ಗೆಟಪ್ ಇದ್ದು ಅದನ್ನು ತೆರೆಮೇಲೇ ನೋಡಬೇಕು, ಶಾನುಭೋನಾಗಿ ವಿ. ಮನೋಹರ್, ಪಟೇಲನಾಗಿ ಶಂಕರ್ ನಾರಾಯಣ್, ಮನು, ಸನತ್, ಬುಲೆಟ್‌ವಿನು ಎಲ್ಲರೂ ತಂತಮ್ಮ ಪಾತ್ರಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದಾರೆ, ವಿ. ಮನೋಹರ್ ಅವರ ಸಂಯೋಜನೆಯ ಎರಡು ಹಾಡುಗಳು ಇಂಪಾಗಿವೆ. ಅದಕ್ಕೆ ತಕ್ಕಂತೆ ಹಿನ್ನಲೆ ಸಂಗೀತವೂ ಚಿತ್ರಕ್ಕೆ ಮೆರಗು ತುಂಬಿದೆ, ಕೌಟುಂಬಿಕ ಚಿತ್ರಗಳನ್ನುಹೆಚ್ಚು ಇಷ್ಟಪಡುವವರಿಗಾಗಿಯೇ ಮಾಡಿದ ಚಿತ್ರವಿದು.