1
1
ಶಾಸಕ ಸಮೃದ್ಧಿ ವಿ. ಮಂಜುನಾಥ್ ಅವರ ನಿರ್ಮಾಣದ, ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಿರುವ
“ಬೃಂದಾವಿಹಾರಿ” ಚಿತ್ರದ ಐದನೇ ಹಾಡು “ಒಂದೇ ಒಂದು” ಇತ್ತೀಚೆಗೆ ಬಿಡುಗಡೆಯಾಯಿತು. ನಿರ್ಮಾಪಕ ಸಮೃದ್ಧಿ ಮಂಜುನಾಥ್ ಅವರ ಪತ್ನಿ ಪದ್ಮ ಮಂಜುನಾಥ್ ಅವರು ಈ ಹಾಡನ್ನು ಬಿಡುಗಡೆ ಮಾಡಿದರು. ಶ್ರೀನಿವಾಸರಾಜು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

ಡಾ||ವಿ.ನಾಗೇಂದ್ರಪ್ರಸಾದ್ ಅವರ ರಚನೆಯ ಈ ಹಾಡನ್ನು ಕೆ.ಎಸ್. ಚಿತ್ರ ಹಾಗೂ ಜಸ್ಕರಣ್ ಸಿಂಗ್ ಹಾಡಿದ್ದಾರೆ. ಹೇಶಮ್ ಅಬ್ದುಲ್ ವಹಾಬ್ ಅವರ ಸಂಗೀತ ಸಂಯೋಜನೆಯ ಈ ಹಾಡಿನಲ್ಲಿ ಗಣೇಶ್ ಹಾಗೂ ದೇವಿಕಾ ಭಟ್ ಹೆಜ್ಜೆ ಹಾಕಿದ್ದಾರೆ. ಈ ಹಿಂದೆ ಬಿಡುಗಡೆಯಾದ ನಾಲ್ಕು ಹಾಡುಗಳೂ ಸೂಪರ್ ಹಿಟ್ ಆಗಿದ್ದು, ಐದನೇ ಹಾಡಾದ ‘ಒಂದೇ ಒಂದು” ಸಹ ಎಲ್ಲರ ಮನ ಗೆಲ್ಲುತ್ತಿದೆ. ಆನಂದ್ ಆಡಿಯೋ ಮೂಲಕ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿದೆ.
ಅಕ್ಟೋಬರ್ 16ಕ್ಕೆ ನಾಡಹಬ್ಬ ದಸರಾ ಸಂದರ್ಭದಲ್ಲಿ ಈ ಚಿತ್ರ ತೆರೆಗೆ ಬರಲಿದೆ. ’ಕೃಷ್ಣಂ ಪ್ರಣಯ ಸಖಿ” ಚಿತ್ರದ ನಂತರ ಶ್ರೀನಿವಾಸರಾಜು ಹಾಗೂ ಗಣೇಶ್ ಜೋಡಿ ತೆರೆಯಮೇಲೆ ಮತ್ತೊಮ್ಮೆ ಮೋಡಿ ಮಾಡಲಿದೆ.
ಈ ವೇಳೆ ಮಾತನಾಡಿದ ನಟ ಗಣೇಶ್, ಒಳ್ಳೆಯ ಸಾಲುಗಳನ್ನು ಕೊಟ್ಟಾಗ ನಮಗೆ ಹೆಚ್ಚಿನ ಕೆಲಸವಿರುವುದಿಲ್ಲ. ಅಂಥ ಅದ್ಭುತ ಸಾಲುಗಳನ್ನು ಕೊಟ್ಟ ಡಾ||ನಾಗೇಂದ್ರ ಪ್ರಸಾದ್ ಅವರಿಗೆ, ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ವಹಾಬ್ ಅವರಿಗೆ, ಗಾಯಕ ಜಸ್ಕರಣ್ ಸಿಂಗ್, ನಿರ್ದೇಶಕ ಶ್ರೀನಿವಾಸರಾಜು ಹಾಗೂ ಚಿತ್ರವನ್ನು ಸಮೃದ್ಧಿಯಾಗಿ ನಿರ್ಮಾಣ ಮಾಡಿರುವ ನಿರ್ಮಾಪಕ ಸಮೃದ್ಧಿ ಮಂಜುನಾಥ್ ಅವರಿಗೆ ಈ ಸಂದರ್ಭದಲ್ಲಿ ಧನ್ಯವಾದ ಹೇಳುತ್ತೇನೆ. ಈ ಹಾಡನ್ನು ನೋಡಿದವರು ನೀವು ಈ ಹಾಡಿನಲ್ಲಿ ಮುದ್ದಾಗಿ ಕಾಣುತ್ತೀರಾ, ಅಭಿನಯ ಕೂಡ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ. ನಾನು ಎಲ್ಲವನ್ನು ಪ್ರೀತಿಯಿಂದ ಮಾಡುತ್ತೇನೆ. ಆದರೆ ಅದು ತೆರೆಯ ಮೇಲೆ ಚೆನ್ನಾಗಿ ಕಾಣಲು ನೀವೆಲ್ಲಾ ನನ್ನ ಮೇಲಿಟ್ಟಿರುವ ಪ್ರೀತಿಯೇ ಕಾರಣ. ಆ ಪ್ರೀತಿ ಸದಾ ಇರಲಿ. ಅಕ್ಟೋಬರ್ 16ಕ್ಕೆ ನಮ್ಮ “ಬೃಂದಾವಿಹಾರಿ” ಚಿತ್ರ ನಿಮ್ಮ ಮುಂದೆ ಬರಲಿದೆ. ನೋಡಿ. ಪ್ರೋತ್ಸಾಹ ನೀಡಿ ಎಂದು ಹೇಳಿದರು.

ನಿರ್ಮಾಪಕ ಸಮೃದ್ಧಿ ಮಂಜುನಾಥ್ ಮಾತನಾಡುತ್ತ ಕ್ರಿಕೆಟ್ ನಿಂದ ನಮ್ಮ ಸ್ನೇಹ ಆರಂಭವಾಯಿತು. ನನ್ನನ್ನು ಚಿತ್ರರಂಗಕ್ಕೆ ಕರೆತಂದವರೇ ಗಣೇಶ್. ಈಗ ನಮ್ಮ ಸಂಸ್ಥೆಯ ನಿರ್ಮಾಣದ ಚಿತ್ರಕ್ಕೆ ಅವರೇ ನಾಯಕರಾಗಿರುವುದಕ್ಕೆ ಬಹಳ ಖುಷಿಯಿದೆ. “ಬೃಂದಾವಿಹಾರಿ” ಒಂದೊಳ್ಳೆ ಕೌಟುಂಬಿಕ ಚಿತ್ರವಾಗಿದ್ದು, ಹಾಡುಗಳು ಕೂಡ ಒಂದಕ್ಕಿಂತ ಒಂದು ಅದ್ಭುತವಾಗಿ ಮೂಡಿಬಂದಿವೆ. ಇಂದು ನಮ್ಮ ಸಮೃದ್ಧಿ ಸಂಸ್ಥೆಗೆ ಹದಿನೈದು ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ “ಒಂದೇ ಒಂದು” ಹಾಡು ಕೂಡ ಬಿಡುಗಡೆಯಾಗಿದೆ. ಈ ಹಾಡನ್ನು ನಮ್ಮ ಸಮೃದ್ಧಿ ಸಂಸ್ಥೆಯ ಎಲ್ಲರಿಗೂ ಅರ್ಪಿಸುತ್ತೇನೆ. ಅಕ್ಟೋಬರ್ 16ರ ನಾಡಹಬ್ಬದ ಸಂದರ್ಭದಲ್ಲಿ ನಮ್ಮ ಸಿನಿಮಾ ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ನೀವೆಲ್ಲ ಕುಟುಂಬ ಸಮೇತ ಬಂದು ನಮ್ಮ ಚಿತ್ರ ನೋಡಿ ಹರಸಿ ಎಂದು ಹೇಳಿದರು.
ನಿರ್ದೇಶಕ ಶ್ರೀನಿವಾಸ ರಾಜು ಮಾತನಾಡಿ, ಈಗಾಗಲೇ ಬಿಡುಗಡೆಯಾಗಿರುವ ನಮ್ಮ ಚಿತ್ರದ ನಾಲ್ಕು ಹಾಡುಗಳನ್ನು ತಾವೆಲ್ಲರು ತುಂಬಾ ಮೆಚ್ಚಿಕೊಂಡಿದ್ದೀರಿ. ಐದನೇ ಹಾಡಾಗಿ “ಒಂದೇ ಒಂದು” ಬಿಡುಗಡೆಯಾಗಿದೆ. ಈ ಹಾಡನ್ನು ಬರೆಯಲು ನಾಗೇಂದ್ರ ಪ್ರಸಾದ್ ಅವರು ಎರಡು ತಿಂಗಳ ಸಮಯ ತೆಗೆದುಕೊಂಡಿದ್ದಾರೆ. ಸಾಮಾನ್ಯವಾಗಿ ಹದಿನಾರರಿಂದ ಅರವತ್ತು ವಯಸ್ಸಿನವರೆಗೂ ಎಲ್ಲಾ ಹೆಣ್ಣುಮಕ್ಕಳು ತಾವು ಪ್ರೀತಿಸುವ ಗಂಡಸರನ್ನು ಕೇಳುವ ಪ್ರಶ್ನೆ, ನೀವು ನನ್ನನ್ನು ಎಷ್ಟು ಪ್ರೀತಿಸುತ್ತೀರಾ? ಎಂದು. ಅವರೆಲ್ಲರ ಪ್ರಶ್ನೆಗೆ ಉತ್ತರವಾಗಿ ಈ ಹಾಡು ಮೂಡಿಬಂದಿದೆ. ನಮ್ಮ ಚಿತ್ರದ ಎಲ್ಲಾ ಹಾಡುಗಳನ್ನು ನಾಗೇಂದ್ರ ಪ್ರಸಾದ್ ಅವರೇ ಬರೆದಿದ್ದಾರೆ. ನಮ್ಮ ಚಿತ್ರ ಎಲ್ಲರಿಗೂ ಮೆಚ್ಚುಗೆಯಾಗುವ ಭರವಸೆ ಇದೆ ಎಂದರು.
ಗೀತರಚನೆಕಾರ ವಿ.ನಾಗೇಂದ್ರಪ್ರಸಾದ್
ಮಾತನಾಡುತ್ತ ಈ ಚಿತ್ರದಲ್ಲಿ ಏಳು ಹಾಡುಗಳಿದ್ದು, ವಿಶೇಷವೆಂದರೆ ಎಲ್ಲಾ ಹಾಡುಗಳನ್ನು ದ್ವಿರುಕ್ತಿ ಬಳಸಿ ಬರೆದಿದ್ದೇನೆ. “ರಾಮ ರಾಮ”, ” ರಾಧೆ ರಾಧೆ” ಹೀಗೆ. ಪ್ರಸ್ತುತ ಈಗ “ಒಂದೇ ಒಂದು” ಹಾಡು ಬಿಡುಗಡೆಯಾಗಿದೆ. ಈ ಹಾಡನ್ನು ತೆರೆ ಮೇಲೆ ನೋಡಿದ ಮೇಲೆ ಮನಸ್ಸು ತುಂಬಿ ಬಂದಿದೆ ಎಂದು ಹೇಳಿದರು.
ನಾಯಕಿ ದೇವಿಕಾ ಭಟ್ ಮಾತನಾಡಿ “ಬೃಂದಾವಿಹಾರಿ” ನನ್ನ ಮೊದಲ ಚಿತ್ರ. ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದರು.
ಆಗಷ್ಟೇ ರಿಲೀಸಾದ “ಒಂದೇ ಒಂದು” ಹಾಡಿನ ಕೆಲವು ಸಾಲುಗಳನ್ನು ಹಾಡುವ ಮೂಲಕ ಗಾಯಕ ಜಸ್ಕರಣ್ ಸಿಂಗ್ ನೆರೆದಿದ್ದ ಜನರನ್ನು ರಂಜಿಸಿದರು.