Popular Posts

ಪಾ. ರಂಜಿತ್ ನಿರ್ದೇಶನದ ‘ವೆಟ್ಟುವಮ್’ ಆಕ್ಷನ್ ಚಿತ್ರಕ್ಕೆ ಕನ್ನಡದಲ್ಲಿ ಕಿಚ್ಚ ಸುದೀಪ್ ಧ್ವನಿ

ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಪಾ. ರಂಜಿತ್ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಅಪೋಕ್ಯಾಲಿಪ್ಟಿಕ್ ಆಕ್ಷನ್ ಸಿನಿಮಾ ‘ವೆಟ್ಟುವಮ್’ ದೊಡ್ಡಮಟ್ಟದ ಕುತೂಹಲ ಮೂಡಿಸಿದೆ. ಪಾ. ರಂಜಿತ್ ಅವರ ‘ನೀಲಂ ಪ್ರೊಡಕ್ಷನ್ಸ್’ ಹಾಗೂ ‘ಲರ್ನ್ ಅಂಡ್ ಟೀಚ್ ಪ್ರೊಡಕ್ಷನ್’ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದ ಕಾಲ್ಪನಿಕ ಜಗತ್ತನ್ನು ಪರಿಚಯಿಸುವ ‘ವರ್ಲ್ಡ್ ಆಫ್ ವೆಟ್ಟುವಮ್’ ವಿಡಿಯೋ ಬಿಡುಗಡೆಯಾಗಿದ್ದು, ಇದರ ಬೆನ್ನಲ್ಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡ ಅನಾವರಣವಾಗಲಿದೆ.

ಈ ‘ವರ್ಲ್ಡ್ ಆಫ್ ವೆಟ್ಟುವಮ್’ ಪರಿಚಯಾತ್ಮಕ ವಿಡಿಯೋ ಐದು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸಾಗಿದ್ದು, ಬಹುಭಾಷಾ ಸೂಪರ್‌ಸ್ಟಾರ್‌ಗಳ ಧ್ವನಿಯ ಸಾಥ್ ಇದಕ್ಕೆ ಸಿಕ್ಕಿದೆ. ಚಿತ್ರದ ಕನ್ನಡ ಆವೃತ್ತಿಗೆ ಕಿಚ್ಚ ಸುದೀಪ್ ಅವರು ವಾಯ್ಸ್ ಓವರ್ ನೀಡಿರುವುದು ವಿಶೇಷ. ಉಳಿದಂತೆ ಹಿಂದಿ ಆವೃತ್ತಿಗೆ ನಟ ಪಂಕಜ್ ತ್ರಿಪಾಠಿ, ತೆಲುಗಿಗೆ ರಾಣಾ ದಗ್ಗುಬಾಟಿ, ಮಲಯಾಳಂಗೆ ಸೌಬಿನ್ ಶಾಹಿರ್ ಹಾಗೂ ತಮಿಳು ಆವೃತ್ತಿಗೆ ಸ್ವತಃ ನಿರ್ದೇಶಕ ಪಾ. ರಂಜಿತ್ ಅವರೇ ಖಡಕ್ ಧ್ವನಿ ನೀಡುವ ಮೂಲಕ ಚಿತ್ರದ ಗಾಂಭೀರ್ಯವನ್ನು ಹೆಚ್ಚಿಸಿದ್ದಾರೆ.

ಅಪೋಕ್ಯಾಲಿಪ್ಟಿಕ್ ವಿಶಿಷ್ಟ ಕಲ್ಪನೆಯ ಹಿನ್ನೆಲೆಯಲ್ಲಿ ಈ ಚಿತ್ರದ ಕಥಾಹಂದರ ಸಾಗಲಿದೆ. ವಿವಿಧ ಪ್ರಬಲ ಗುಂಪುಗಳ ನಡುವಿನ ಅಧಿಕಾರದ ಸ್ಪರ್ಧೆ, ಭೀಕರ ಸಂಘರ್ಷ ಹಾಗೂ ಅನಿರೀಕ್ಷಿತ ತಿರುವುಗಳ ಸುತ್ತ ಹೆಣೆಯಲಾದ ಈ ಕಥೆಯು ಅದ್ಭುತ ದೃಶ್ಯ ವೈಭವ ಹಾಗೂ ಮೈನವಿರೇಳಿಸುವ ಹೈ-ವೋಲ್ಟೇಜ್ ಆಕ್ಷನ್ ಸನ್ನಿವೇಶಗಳನ್ನು ಒಳಗೊಂಡಿದೆ.

ಭಾರತೀಯ ಸಾಂಪ್ರದಾಯಿಕ ಸಮರ ಕಲೆಗಳಾದ ‘ಅಡಿಮುರೈ’ ಮತ್ತು ‘ಮಲ್ಲಕಂಬ’ ಕೌಶಲಗಳನ್ನು ಆಧರಿಸಿ ಸಾಹಸ ದೃಶ್ಯಗಳನ್ನು ವಿನ್ಯಾಸಗೊಳಿಸಲಾಗಿದ್ದು, ಚಿತ್ರದಲ್ಲಿ ನಟಿಸಿರುವ ಪ್ರಮುಖ ಕಲಾವಿದರೆಲ್ಲರೂ ಈ ಕಲೆಗಳಲ್ಲಿ ವಿಶೇಷ ತರಬೇತಿ ಪಡೆದು ನೈಜವಾಗಿ ಆಕ್ಷನ್ ಮಾಡಿದ್ದಾರೆ.
ಈ ಚಿತ್ರದಲ್ಲಿ ಆರ್ಯ, ದಿನೇಶ್, ಶಬೀರ್, ಶೋಭಿತಾ ಧುಲಿಪಾಲ ಹಾಗೂ ಕಲೈಯರಸನ್ ರಂಥ ಪ್ರತಿಭಾವಂತರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.‌ ಈ ಚಿತ್ರಕ್ಕೆ ಎಸ್.ಎಸ್. ಮೂರ್ತಿ ಕಲಾ ನಿರ್ದೇಶನ, ರೂಪೇಶ್ ಶಾಜಿ ಛಾಯಾಗ್ರಹಣ, ಸೆಲ್ವ ಆರ್.ಕೆ. ಸಂಕಲನ, ದಿಲೀಪ್ ಸುಬ್ಬರಾಯನ್ ಸಾಹಸ ನಿರ್ದೇಶನ ಹಾಗೂ ಜಿ.ವಿ. ಪ್ರಕಾಶ್ ಕುಮಾರ್ ಅವರ ಸಂಗೀತ ಸಂಯೋಜನೆ ಇದೆ. ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿರುವ ‘ವೆಟ್ಟುವಮ್’ ಚಿತ್ರದ ಫಸ್ಟ್ ಲುಕ್ ಗಾಗಿ ಇಡೀ ಚಿತ್ರರಂಗ ಕಾತರದಿಂದ ಕಾಯುತ್ತಿದೆ.

Leave a Reply

Your email address will not be published. Required fields are marked *