Popular Posts

ಹಳ್ಳಿ ಹೆಣ್ಣುಮಕ್ಕಳ ಮಾನ ಪ್ರಾಣ ಕಾಪಾಡುವ ರೈತನೇ ವಾರಿಯರ್

Rating: ****

ನಮ್ಮ ಸಮಾಜದಲ್ಲಿ ರೈತ ಎಂದರೆ ಆತ ಅವಿದ್ಯಾವಂತ, ಹೊಲದಲ್ಲಿ ದುಡಿಯುವುದಷ್ಟೇ ಆತನಿಗೆ ಗೊತ್ತಿರೋದು ಎಂಬ ಭಾವನೆಯಿದೆ. ಆದರೆ ವಿದ್ಯಾವಂತನೂ ರೈತನಾಗಿ ಹಳ್ಳಿಯನ್ನು ಉದ್ದಾರ ಮಾಡಬಹುದು ಎಂದು ಈವಾರ ತೆರೆಕಂಡಿರುವ ವಾರಿಯರ್ ಚಿತ್ರದ ಮೂಲಕ ನಿರ್ದೇಶಕ ಉಮೇಶ್ ಹೆಬ್ಬಾಳ ವಾರಿಯರ್ ಚಿತ್ರದಲ್ಲಿ ನಿರೂಪಿಸಿದ್ದಾರೆ‌.

ಆ ಹಳ್ಳಿಯ ಜನರಿಗೆ ಗೌಡರು ಎಂದರೆ ಅಪಾರ ಗೌರವ ನಂಬಿಕೆ, ಊರಿಗೆ ಏನೇ ತೊಂದರೆಯಾದರೂ, ಅನ್ಯಾಯ ನಡೆದರೂ ಮುಂದೆ ನಿಂತು ನ್ಯಾಯ ಕೊಡಿಸುತ್ತಾರೆ. ಇವರ ಮಗ ಧ್ರುವ ಕೂಡ ತಂದೆಯಂತೆಯೇ ಗ್ರಾಮದಲ್ಲಿ ಜನರ ಪ್ರೀತಿ ವಿಶ್ವಾಸ ಗಳಿಸಿರುತ್ತಾನೆ. ಮಾಸ್ಟರ್ ಡಿಗ್ರಿ ಓದಿಕೊಂಡಿದ್ದರೂ ಹಳ್ಳಿಯಲ್ಲಿ ಕೃಷಿ ಮಾಡಿಕೊಂಡಿರುತ್ತಾನೆ, ಒಮ್ಮೆ ರೈತನಿಗೆ ಮೋಸ ಮಾಡಿದ ಕೃಷಿ ಅಧಿಕಾರಿಗೆ ಮುಷ್ಕರದ ಮೂಲಕ ಬಿಸಿ ಮುಟ್ಟಿಸುತ್ತಾನೆ.
ಇಂಥ ಹಳ್ಳಿಯಲ್ಲಿ ಒಂದು ಪ್ರೌಢಶಾಲೆ ಇಲ್ಲದೆ ಹೆಣ್ಣುಮಕ್ಕಳು ಪಕ್ಕದ ಹಳ್ಳಿಗೆ ಹೋಗಬೇಕಾಗಿರುತ್ತದೆ. ಆದರೆ ದಾರಿಯಲ್ಲಿ ಓಡಾಡುವ ಹೆಣ್ಣುಮಕ್ಕಳನ್ನು ಚಿರತೆಯೊಂದು ಬಲಿ ತೆಗೆದುಕೊಳ್ಳುತ್ತಿರುವುದು ದೊಡ್ಡ ಸಮಸ್ಯೆಯಾಗುತ್ತದೆ. ಅದನ್ನು ಧ್ರುವ ಹೇಗೆ ಬಗೆಹರಿಸಿ ಹಳ್ಳಿಯ ಜನ ನೆಮ್ಮದಿಯಿಂದ ಉಸಿರಾಡುವಂತೆ ಮಾಡುತ್ತಾನೆ ಎನ್ನುವುದೇ ವಾರಿಯರ್ ಚಿತ್ರದ ಕಥಾನಕ. ಉಮೇಶ್ ಹೆಬ್ಬಾಳ ಅವರು ನಿರ್ದೇಶನದ ಜತೆ ನಾಯಕ ಧ್ರುವನ ಪಾತ್ರದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ,

ಹಳ್ಳಿಯಲ್ಲಿ ಶಾಲೆಯೊಂದು ಇಲ್ಲದಿದ್ದರೆ ಮಕ್ಕಳು, ಅದರಲ್ಲೂ ಹೆಣ್ಣುಮಕ್ಕಳು ಏನೆಲ್ಲ ತೊಂದರೆ ಅನುಭವಿಸುತ್ತಾರೆ, ಇದೇ ಸಂದರ್ಭವನ್ನು ಕಾಮುಕ ವ್ಯಕ್ತಿಗಳು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಾರೆ ಎಂದು ಉಮೇಶ್ ಕುತೂಹಲಕರವಾಗಿ ನಿರೂಪಿಸಿದ್ದಾರೆ, ನಮಗೆ ಅನ್ನ ಕೊಡುವ ರೈತ ಎದುರಿಸುತ್ತಿರುವ ಸಮಸ್ಯೆಗಳು, ಅವರ ಕುಟುಂಬಕ್ಕೆ ರಕ್ಷಣೆ ನೀಡುವುದು ಅಧಿಕಾರ ವಹಿಸಿಕೊಂಡವರ ಕರ್ತವ್ಯ, ಅವರೇ ರೈತರನ್ನು ನಿರ್ಲಕ್ಷೆ ಮಾಡಿದರೆ ಆತ ಯಾರಬಳಿ ನ್ಯಾಯ ಕೇಳಬೇಕು? ಇದಕ್ಕೆಲ್ಲ ಪರಿಹಾರ ಏನು? ಇಂಥ ರೈತರ ಹಲವಾರು ಸಮಸ್ಯೆಗಳಿಗೆ ನಿರ್ದೇಶಕರು ವಾರಿಯರ್ ಚಿತ್ರದಲ್ಲಿ ಉತ್ತರ ನೀಡಲು ಪ್ರಯತ್ನಿಸಿದ್ದಾರೆ. ಪ್ರತಿ ಹಳ್ಳಿಯಲ್ಲೂ ಒಂದು ಶಾಲೆ ಇರಬೇಕು, ಆಗಷ್ಟೇ ಹೆಣ್ಣುಮಕ್ಕಳಿಗೆ ಶಿಕ್ಷಣ ಸಿಗಲು ಸಾಧ್ಯ. ರೈತರ ಸಮಸ್ಯೆಗಳು, ಶಿಕ್ಷಣ ವ್ಯವಸ್ಥೆಯ ಲೋಪದೋಷಗಳು, ತಾನು ಮಾಡೋ ಕೆಟ್ಟ ಕೆಲಸಗಳನ್ನು ವನ್ಯಜೀವಿಗಳ ಮೇಲೆ ಹಾಕುವುದು ಎಷ್ಟು ಸರಿ, ಮುಗ್ಧ ಹೆಣ್ಣುಮಕ್ಕಳು ಮಾಡಿದ ತಪ್ಪಾದರೂ ಏನು, ಹಳ್ಳಿಯ ಮಕ್ಕಳಿಗೆ ಬಸ್ ವ್ಯವಸ್ಥೆ ಬೇಕು, ಕೇವಲ ರೈತ ಎಂದು ಯಾವತ್ತೂ ನಿರ್ಲಕಗಷಿಸಬಾರದು, ಇಂಥ ಸಾಕಷ್ಟು ವಿಷಯಗಳ ಮೇಲೆ ವಾರಿಯರ್ ಚಿತ್ರ ಬೆಳಕು ಚೆಲ್ಲಲಿದೆ, ಇಲ್ಲಿ ಕತೆಯೇ ಹೀರೋ. ಮನುಷ್ಯ ತಾನು ಮಾಡುವ ಕೆಟ್ಟ ಕೆಲಸಗಳನ್ನು ಕಾಡಿನ ಪ್ರಾಣಿಗಳ ಮೇಲೆ ಹಾಕುತ್ತಿದ್ದಾನೆ. ನಿರ್ದೇಶಕ ಉಮೇಶ್ ಹೆಬ್ಬಾಳ್ ರೈತ ಎದುರಿಸುತ್ತಿರುವ ಸಮಸ್ಯೆಗಳನ್ನೇ ಪ್ರಮುಖವಾಗಿಟ್ಟುಕೊಂಡು ಕಮರ್ಷಿಯಲ್ ಆಗಿ ಚಿತ್ರವನ್ನು ತೆರೆಮೇಲೆ ನಿರೂಪಿಸಿದ್ದಾರೆ, ನಾಯಕಿ ಗೌರಿಯ ಪಾತ್ರಕ್ಕೆ ಸೌಮ್ಯ ಸುಭಾಷ್ ನ್ಯಾಯ ಸಲ್ಲಿಸಿದ್ದಾರೆ, ಗೌಡನ ಪಾತ್ರದಲ್ಲಿ ಬಲ ರಾಜವಾಡಿ ಅವರ ಅಭಿನಯ ಚಿತ್ರದ ಪ್ಲಸ್ ಪಾಯಿಂಟ್, ಇಡೀ ಚಿತ್ರದ ಕತೆ ಹಳ್ಳಿಯ ಹಿನ್ನೆಲೆಯಲ್ಲಿ ನಡೆಯುತ್ತದೆ. ಚಿತ್ರದ ಸಂಗೀತ ಹಾಡುಗಳು ಜತೆಗೆ ಕ್ಯಾಮೆರಾ ವರ್ಕ್ ಕೂಡ ಉತ್ತಮವಾಗಿದೆ,

Leave a Reply

Your email address will not be published. Required fields are marked *