1
1
ತೆಲುಗು ಚಿತ್ರರಂಗದ ನ್ಯಾಚುರಲ್ ಸ್ಟಾರ್ ಖ್ಯಾತಿಯ ನಟ ನಾನಿ ಅಭಿನಯದ ಬಹುನಿರೀಕ್ಷಿತ ಆ್ಯಕ್ಷನ್ ಡ್ರಾಮಾ ದಿ ಪ್ಯಾರಡೈಸ್ ಇದೇ ತಿಂಗಳ. 24ರಂದು ತೆರೆಗೆ ಬರುತ್ತಿದೆ. ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ನಾನಿ ಕೆಲ ವಿಚಾರಗಳನ್ನು ಹಂಚಿಕೊಂಡರು.
ಕನ್ನಡದಲ್ಲೇ ತನ್ನ ಮಾತು ಆರಂಭಿಸಿದ ನಾನಿ, ಮುಂದಿನಸಲ ತಾನು ಬೆಂಗಳೂರಿಗೆ ಬಂದಾಗ ಸ್ಪಷ್ಟವಾಗಿ ಕನ್ನಡ ಮಾತಾಡೋದನ್ನು ಕಲಿಯುವುದಾಗಿ ಭರವಸೆ ನೀಡಿದರು. ಬೆಂಗಳೂರು ಹಾಗೂ ಕನ್ನಡಿಗರ ಜೊತೆಗಿನ ತಮ್ಮ ಬಾಂಧವ್ಯದ ಕುರಿತು ಮಾತನಾಡಿದ ನಾನಿ, “ಕೆಂಪೇಗೌಡ ಏರ್ಪೋರ್ಟ್ನಲ್ಲಿ ಇಳಿದ ಕ್ಷಣದಿಂದಲೇ ನಾನು ಹೈದರಾಬಾದ್ನಲ್ಲಿದ್ದೇನೋ ಅಥವಾ ಎಲ್ಲಿಗೆ ಬಂದೆನೋ ಎನ್ನುವಷ್ಟು ಆತ್ಮೀಯವಾಗಿ ಇಲ್ಲಿನ ಜನ ಪ್ರೀತಿಯಿಂದ ಮಾತನಾಡಿಸುತ್ತಾರೆ. ಆದರೆ ಕೇವಲ ಸಿನಿಮಾ ಪ್ರಚಾರಕ್ಕಾಗಿ ಬಂದ ತಾನು ತಕ್ಷಣ ಹಿಂತಿರುಗುತ್ತಿರುವುದಕ್ಕೆ ಬೇಸರವಿದೆ. ಇಲ್ಲಿನ ಆಹಾರ, ಸಂಸ್ಕೃತಿ ಮತ್ತು ಸಂಭ್ರಮವನ್ನು ಸಂಪೂರ್ಣವಾಗಿ ಆಸ್ವಾದಿಸಲು ಇನ್ನೆರಡು ದಿನ ಉಳಿದುಕೊಳ್ಳಬೇಕು ಎನಿಸುತ್ತದೆ. ಮುಂದೊಮ್ಮೆ ಬೆಂಗಳೂರಿಗೆ ಕೇವಲ ವಿಶ್ರಾಂತಿಗಾಗಿ ಪ್ರತ್ಯೇಕ ಟ್ರಿಪ್ ಪ್ಲಾನ್ ಮಾಡುತ್ತೇನೆ. ಯಾವುದೇ ಭಾಷೆಯ ಉತ್ತಮ ಚಿತ್ರ ಬಂದರೂ ಪ್ರೀತಿಯಿಂದ ಬೆಂಬಲಿಸುವ ಕನ್ನಡಿಗರ ಹೃದಯ ವೈಶಾಲ್ಯಕ್ಕೆ ನಾನು ಸದಾ ಚಿರಋಣಿ” ಎಂದರು. ನಾನು ಬೆಂಗಳೂರಿಗೆ ಬಂದರೆ ನನ್ನ ಮನೆಗೆ ಬಂದಂತೆ ಭಾಸವಾಗುತ್ತದೆ ಎಂದು ನಾನಿ ಭಾವುಕರಾಗಿ ನುಡಿದರು.

ದ ಪ್ಯಾರಡೈಸ್ ಚಿತ್ರದ ಕುರಿತಂತೆ ಮಾತನಾಡುತ್ತ “ಇದು ನನ್ನ ಇಡೀ ವೃತ್ತಿ ಜೀವನದಲ್ಲೇ ಅತ್ಯಂತ ನಿರೀಕ್ಷಿತ ಹಾಗೂ ಪ್ರತಿಷ್ಠಿತ ಚಿತ್ರ. ನನ್ನ ಕೆರಿಯರ್ನಲ್ಲಿ ನಾನು ಅತಿ ಹೆಚ್ಚು ದಿನಗಳ ಕಾಲ ಶೂಟಿಂಗ್ನಲ್ಲಿ ಭಾಗವಹಿಸಿದ್ದು ಈ ಚಿತ್ರಕ್ಕಾಗಿಯೇ. ಇದೊಂದು ತಾಯಿ ಮತ್ತು ಮಗನ ಬಾಂಧವ್ಯದ ಸುತ್ತ ಸಾಗುವ ಕಥೆ. ಜಗತ್ತಿನಲ್ಲೇ ಅತ್ಯಂತ ದೊಡ್ಡ ಭಾವನೆಯಾದ ತಾಯಿ-ಮಗನ ಪ್ರೀತಿಯನ್ನು ಒಂದು ಅದ್ಭುತ ಆ್ಯಕ್ಷನ್ ಎನರ್ಜಿ ಹಾಗೂ ದೃಶ್ಯ ವೈಭವದೊಂದಿಗೆ ತೆರೆಯ ಮೇಲೆ ಕಟ್ಟಿಕೊಡಲಾಗಿದೆ. ಅನಿರುದ್ಧ್ ಅವರ ಸಂಗೀತ ಚಿತ್ರಕ್ಕಿದ್ದು, ಮೋಹನ್ ಬಾಬು, ಸೊನಾಲಿ ಕುಲಕರ್ಣಿ, ರಾಘವ್ ಜುಯಲ್ ಹಾಗೂ ಕಯಾದು ಅವರ ತಾರಾಗಣ ಈ ಚಿತ್ರಕ್ಕಿದೆ.
ಶ್ರೀಕಾಂತ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಸೆಪ್ಟೆಂಬರ್ 24ರಂದು ಬಿಗ್ ಸ್ಕ್ರೀನ್ನಲ್ಲಿ ಅದ್ಭುತ ಸಿನಿಮೀಯ ಅನುಭವ ನೀಡಲಿದೆ” ಎಂದು ನಾನಿ ತಿಳಿಸಿದರು.