1
1
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಬಹುನಿರೀಕ್ಷಿತ ‘ತಮ್ಮ ಸುಖಾಗಮನ ಬಯಸುವ’ ಚಿತ್ರದ ನಾಯಕಿಯಾಗಿ ಸಂಜನಾ ಆನಂದ್ ಆಯ್ಕೆಯಾಗಿದ್ದಾರೆ. ರಾಮೇನಹಳ್ಳಿ ಜಗನ್ನಾಥ್ ಅವರು ನಿರ್ದೇಶಿಸುತ್ತಿರುವ, ಕೌಟುಂಬಿಕ ಕಥಾಹಂದರವುಳ್ಳ ಈ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದ್ದು, ಬೆಂಗಳೂರಿನಲ್ಲಿ ತನ್ನ ಮೊದಲ ಹಂತದ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ.
‘ಹೊಂದಿಸಿ ಬರೆಯಿರಿ’ ಖ್ಯಾತಿಯ ರಾಮೇನಹಳ್ಳಿ ಜಗನ್ನಾಥ್, ಈ ಬಾರಿಯೂ ಭಾವನೆಗಳಿಗೆ ಒತ್ತು ನೀಡುವ ಕಥೆಯನ್ನು ಆಯ್ದುಕೊಂಡಿದ್ದಾರೆ. ಗಣೇಶ್ ಅವರ ನಟನಾ ಶೈಲಿಯನ್ನು ಮನಸ್ಸಿನಲ್ಲಿಟ್ಟುಕೊಂಡೇ ಜಗನ್ನಾಥ್ ಈ ಚಿತ್ರದ ಕಥೆಯನ್ನು ಸಿದ್ಧಪಡಿಸಿದ್ದಾರೆ. ಗಣೇಶ್ ಅವರ ಐಕಾನಿಕ್ ಚಿತ್ರ ‘ಮುಂಗಾರು ಮಳೆ’ಯಿಂದ ಪ್ರೇರಿತರಾಗಿ ಅವರೊಂದಿಗೆ ಕೆಲಸ ಮಾಡುವ ಇಚ್ಛೆ ಹೊಂದಿದ್ದ ನಿರ್ದೇಶಕರಿಗೆ, ಈ ಚಿತ್ರ ತುಂಬಾ ವಿಶೇಷ.

ಗೋಲ್ಡನ್ ಸ್ಟಾರ್ ಗಣೇಶ್ ಅವರು ಸ್ಯಾಂಡಲ್ವುಡ್ನಲ್ಲಿ 20 ವರ್ಷಗಳ ಯಶಸ್ವಿ ಪಯಣವನ್ನು ಸಂಭ್ರಮಿಸುವ ವಿಶೇಷ ಚಿತ್ರವಾಗಿ ‘ತಮ್ಮ ಸುಖಾಗಮನ ಬಯಸುವ’ ಮೂಡಿಬರುತ್ತಿದೆ. ವೈಷ್ಣವಿ ಫಿಲ್ಮ್ಸ್ ಲಾಂಛನದಲ್ಲಿ ಅಶ್ವಿನಿ ವಿಜಯ ಲೋಹಿತ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಸತೀಶ್ ಹೆಚ್. ಗೌಡ ಸಹ-ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ.
ಈ ಕೌಟುಂಬಿಕ ಚಿತ್ರಕ್ಕೆ ದೊಡ್ಡ ತಾರಾಬಳಗದ ಬಲವಿದೆ. ಅನುಭವಿ ನಟರಾದ ರಂಗಾಯಣ ರಘು, ಅಚ್ಯುತ್ ಕುಮಾರ್ ಮತ್ತು ಸಾಧು ಕೋಕಿಲ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅರ್ಜುನ್ ಜನ್ಯ ಅವರು ಈ ಚಿತ್ರದ ಸಂಗೀತ ಸಂಯೋಜನೆ ಮಾಡುತ್ತಿದ್ದು, ನವೀನ್ಕುಮಾರ್ ಐ.ಅವರ ಛಾಯಾಗ್ರಹಣ ಚಿತ್ರಕ್ಕಿರಲಿದೆ. ಗಣೇಶ್ ಹಾಗೂ ಸಂಜನಾ ಆನಂದ್ ಅವರ ಕೆಮಿಸ್ಟ್ರಿಈ ಚಿತ್ರದ ಪ್ರಮುಖ ಆಕರ್ಷಣೆಯಾಗಲಿದೆ.
ಇತ್ತೀಚಿನ ದಿನಗಳಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಂಜನಾ ಆನಂದ್ ಅವರಿಗೆ ಈ ಸಿನಿಮಾ ದೊಡ್ಡ ಮೈಲಿಗಲ್ಲಾಗುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಚಿತ್ರದ ಉಳಿದ ತಾರಾಗಣ ಹಾಗೂ ಪಾತ್ರಗಳ ಕುರಿತು ಹೆಚ್ಚಿನ ಮಾಹಿತಿಗಳನ್ನು ಹಂಚಿಕೊಳ್ಳುವುದಾಗಿ ಚಿತ್ರತಂಡ ತಿಳಿಸಿದೆ.