Popular Posts

ಮೈಸೂರು ಯುವಕರೇ‌ ನಿರ್ಮಿಸಿರುವ “ಲೈಫ್ ಎಲ್ಲಿಂದ್ ಎಲ್ಲಿಗೆ” ಟ್ರೈಲರ್

ಬಹುತೇಕ ಮೈಸೂರಿನ ಯುವ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಚಿತ್ರ ‘ಲೈಫ್ ಎಲ್ಲಿಂದ ಎಲ್ಲಿಗೆ’. ಬೆಲೆ ಕಟ್ಟಲಾಗದ ಸ್ನೇಹ ಸಂಬಂಧದ ಸುತ್ತ ನಡೆಯುವ ಕಥಾಹಂದರ ಒಳಗೊಂಡ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಮೈಸೂರಿನಲ್ಲೇ ನಡೆಯಿತು. ಎಂಟು ವರ್ಷಗಳ ನಂತರ ಭೇಟಿಯಾಗುವ ಮೂವರು ಆತ್ಮೀಯ ಸ್ನೇಹಿತರೆಲ್ಲಾ ಟ್ರಿಪ್ ಹೋಗುತ್ತಾರೆ. ಆ ಸ್ನೇಹಿತರಲ್ಲಿ ಒಬ್ಬ ತನ್ನ ಕಳೆದುಹೋದ ತಂದೆಯ ಹುಡುಕಾಟದಲ್ಲಿರುತ್ತಾನೆ, ಈ ಸ್ನೇಹಿತರು ಟ್ರಿಪ್ ಹೋದಂಥ ಸಂದರ್ಭದಲ್ಲಿ ಏನೆಲ್ಲ ನಡೆಯುತ್ತೆ ಎಂಬುದನ್ನು ನಿರ್ದೇಶಕ ಅರ್ಜುನ್ ಶಿವನ್ ಅವರು ಅದ್ಭುತವಾದ, ಭಾವನಾತ್ಮಕ ಕಥೆಯೊಂದಿಗೆ ಈ ಚಿತ್ರದಲ್ಲಿ ನಿರೂಪಿಸಿದ್ದಾರೆ.
ಲೈಫ್ ಎಲ್ಲಿಂದ ಎಲ್ಲಿಗೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಲೆನಿನ್, ಮಂಜುನಾಥ್, ಕ್ರಿಶ್, ಅರ್ಜುನ್ ಶಿವನ್ ಅಲ್ಲದೆ ನಾಯಕಿಯಾಗಿ ಅನು ಪ್ರೇಮಾ ಅವರು ನಟಿಸಿದ್ದಾರೆ.

ಕಾಮಿಡಿ ಡ್ರಾಮಾ ಜತೆಗೆ ಭಾವನೆಗಳ ಹೂರಣವಾಗಿ ಮೂಡಿಬಂದಿರುವ ಈ ಗೆಳೆಯರ ಪಯಣದಲ್ಲಿ ವಿವಿಧ ಪಾತ್ರಗಳು ಬಂದು ಹೋಗುತ್ತವೆ. ಈಗಾಗಲೇ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ವರ್ಕ್ ಮುಗಿಸಿರುವ ಈ ಚಿತ್ರದ ಟೀಸರ್ ಇದೀಗ ಬಿಡುಗಡೆಯಾಗಿದೆ. ವಿಪ್ರ ವೆಂಚರ್ಸ್ ಮೂಲಕ ಮುಳ್ಳೂರು ಗುರುಪ್ರಸಾದ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸದ್ಯ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ.

ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಅರ್ಜುನ್ ಶಿವನ್ ಮಾತನಾಡಿ ಸಿನಿಮಾ ಮಾಡೋದಲ್ಲ, ಅದು ತಾನಾಗೇ ಆಗಬೇಕು, ಲಾಕ್‌ಡೌನ್ ಸಂದರ್ಭದಲ್ಲಿ ಒಂದು ಸಿನಿಮಾ ಮಾಡಿದ್ದೆ. ಇದು ನನ್ನ ನಿರ್ದೇಶನದ 2ನೇ ಚಿತ್ರ. ಇದೊಂದು ಸ್ನೇಹಿತರ ಜರ್ನಿ ಚಿತ್ರ. ಜೀವನದಲ್ಲಿ ಏನೂ ಪಡೆಯದಿದ್ದರೂ ಸ್ನೇಹಿತರು ಅಂತ ಇರಬೇಕೆಂದು ಚಿತ್ರದ ಮೂಲಕ ಹೇಳಿದ್ದೇನೆ. ಕಿರಿಕ್ ಪಾರ್ಟಿ ಥರ ಒಂದು ಫನ್ ಜರ್ನಿ ಈ ಚಿತ್ರದಲ್ಲಿದೆ. ಈ ಚಿತ್ರಕ್ಕಾಗಿ ಮೈಸೂರಿನಿಂದ ಡೆಲ್ಲಿವರೆಗೆ ಪಯಣಿಸಿದ್ದೇವೆ. ಸ್ನೇಹಿತರ ನಡುವೆ ಇಗೋ ಅನ್ನೋದು ಇರಬಾರದು ಎಂದು ನಮ್ಮ ಚಿತ್ರದ ಮೆಸೇಜ್ ಎಂದರು.

ನಿರ್ಮಾಪಕ ಮುಲ್ಲೂರು ಗುರುಪ್ರಸಾದ್ ಮಾತನಾಡಿ ಈ ಕಥೆ ಕೇಳಿದಾಗಲೇ ನನಗೆ ಕನೆಕ್ಟ್ ಆಯ್ತು. ಹಾಗೆಯೇ ಪ್ರೇಕ್ಷಕರಿಗೂ ಇಷ್ಟ ಆಗುತ್ತದೆ ಎಂಬ ನಂಬಿಕೆಯಿದೆ. ಇದೊಂದು ಸುಂದರ ಜರ್ನಿ ಚಿತ್ರ. ಈ ಕಥೆಯನ್ನು ಈಗಾಗಲೇ ಕಾದಂಬರಿ ರೂಪದಲ್ಲೂ ಹೊರತಂದಿದ್ದೇನೆ. ಸದ್ಯದಲ್ಲೇ ಚಿತ್ರವನ್ನು ರಿಲೀಸ್ ಮಾಡುತ್ತಿದ್ದೇವೆ ಎಂದರು.

ನಾಯಕ ಲೆನಿನ್ ಮಾತನಾಡಿ ಇದು ನನ್ನ ಮೊದಲ ಸಿನಿಮಾ ಎಂದು ಹೇಳಿದರೆ, ನಾಯಕಿ ಅನು ಪ್ರೇಮ ಮಾತನಾಡಿ ಚಿತ್ರದಲ್ಲಿ ನಾನು ರಿಚಾ ಫರ್ನಾಂಡೀಸ್ ಪಾತ್ರ ಮಾಡಿದ್ದೇನೆ ಎಂದರು.

ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಮಾತನಾಡಿ, 50 ವರ್ಷಗಳ ಹಿಂದೆ ಸಹೋದರನ ಜತೆ ಸೇರಿ ವಿಷ್ಣು, ದ್ವಾರಕೀಶ್ ಅಭಿನಯದ ಕಳ್ಳ ಕುಳ್ಳ, ವಿಷ್ಣು ರಜನಿ ಅಭಿನಯದ ಕಿಲಾಡಿ ಕಿಟ್ಟು ಚಿತ್ರಗಳನ್ನು 5 ಲಕ್ಷ ರೂ.ಗಳಲ್ಲಿ ನಿರ್ಮಿಸಿದ್ದೆವು. ಈಗಿನ ದುಬಾರಿ ಕಾಲದಲ್ಲಿ ಸಿನಿಮಾ ಮಾಡಿರುವ ಈ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದರೆ, ಮುಡಾ ಮಾಜಿ ಅಧ್ಯಕ್ಷ ಯಶಸ್ವಿ ಸೋಮಶೇಖರ್ ಮಾತನಾಡುತ್ತ, ಮೈಸೂರಿನ ಹುಡುಗರೇ ಸೇರಿ ನಿರ್ಮಿಸಿರುವ ಈ ಚಿತ್ರ ಯಶಸ್ವಿಯಾಗಲಿ ಎಂದರು.

ಮಾಜಿ ಪಾಲಿಕೆ ಸದಸ್ಯ ಹಾಗೂ ನಿರ್ಮಾಪಕ ಪಾರ್ಥಸಾರಥಿ, ಮಾತನಾಡಿ ನನ್ನ ಕಣ್ಣ ಮುಂದೆ ಬೆಳೆದ ಹುಡುಗರು ಮಾಡಿರುವ ಚಿತ್ರ ಯಶಸ್ವಿಯಾಗಲಿ. ನಾನೂ ಮೊದಲ ಚಿತ್ರದಲ್ಲಿ ಸೋತರೂ, ಎರಡನೇ ಚಿತ್ರದಲ್ಲಿ ಗೆದ್ದೆ. ಒಳ್ಳೆಯ ಪ್ರಯತ್ನಕ್ಕೆ ಖಂಡಿತ ಜಯ ಸಿಗುತ್ತೆ ಎಂದರು.

ಶ್ರೀ ಕೇಟರಿಂಗ್ ಮಾಲೀಕ ಶ್ರೀಧರ್, ಸಾಹಿತಿ ವಿಕ್ರಮ್ ಅಯ್ಯಂಗಾರ್, ವಿತರಕ ನವರತ್ನ ಪ್ರಸಾದ್ ಆಗಮಿಸಿ ತಂಡಕ್ಕೆ ಶುಭ ಕೋರಿದರು. ವೈಶಾಖ ಶಶಿಧರನ್ ಹಾಗೂ ಕಿರಣ್ ವೈಶಿಷ್ಠ ಅವರ ಸಂಗೀತ, ಸುಮಂತ್ ಅವರ ಛಾಯಾಗ್ರಹಣ, ಮಂಜುಸ್ವಾಮಿ ಅವರ ಕಲಾನಿರ್ದೇಶನ ಈ ಚಿತ್ರಕ್ಕಿದೆ.

Leave a Reply

Your email address will not be published. Required fields are marked *