Popular Posts

ನೆನಪಿರಲಿ ಪ್ರೇಮ್ ಅಭಿನಯದ ‘ಕೆಂಪಾಂಬುಧಿ’ ಟೀಸರ್ ಬಿಡುಗಡೆ

ಬೆಂಗಳೂರು ನಗರದ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಆದರ್ಶಮಯ ಬದುಕು, ದೂರದೃಷ್ಟಿ ಮತ್ತು ಪರಂಪರೆಯನ್ನು ಬೆಳ್ಳಿತೆರೆಯ ಮೇಲೆ ತೆರೆದಿಡುವ ಪ್ರಯತ್ನವಾದ ‘ಕೆಂಪಾಂಬುಧಿ’ ಚಿತ್ರವನ್ನು ರಮೇಶ್ ಬೇಗಾರ್ ನಿರ್ದೇಶಿಸಿದ್ದಾರೆ. ಕೆಂಪೇಗೌಡ ಜಯಂತಿಯ ಅಂಗವಾಗಿ ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ ಫೌಂಡೇಶನ್ ಪ್ರಸ್ತುತಪಡಿಸಿರುವ ಈ ಚಿತ್ರಕ್ಕೆ ಹೊಂಬಾಳೆ ಮ್ಯೂಸಿಕ್ ಸಹಯೋಗ ನೀಡಿದೆ. ದೂರದೃಷ್ಟಿಯ ಆಡಳಿತಗಾರ, ಜನಪರ ನಾಯಕ ಹಾಗೂ ಪರಿಸರದ ಮಹತ್ವವನ್ನು ಬಹಳ ಹಿಂದೆಯೇ ಅರಿತು ಅನುಷ್ಠಾನಗೊಳಿಸಿದ್ದ ನಾಡಪ್ರಭು ಕೆಂಪೇಗೌಡರ ಚಿಂತನೆಗಳು ಇಂದಿಗೂ ಬೆಂಗಳೂರಿನ ಅಸ್ತಿತ್ವದ ಅವಿಭಾಜ್ಯ ಭಾಗವಾಗಿದೆ. ಲೇಖಕ ಜಾಣಗೆರೆ ವೆಂಕಟರಾಮಯ್ಯ ಅವರ ಕಾದಂಬರಿಯನ್ನಾಧರಿಸಿದ ‘ಕೆಂಪಾಂಬುಧಿ’, ಇತಿಹಾಸ, ಜನಪದ, ದಂತಕಥೆಗಳು ಹಾಗೂ ಸಾಂಸ್ಕೃತಿಕ ನೆನಪುಗಳನ್ನು ಒಗ್ಗೂಡಿಸಿ ರೂಪುಗೊಂಡ ವಿಶಿಷ್ಟ ಚಿತ್ರವಾಗಿದೆ.

ಇದು ಕೇವಲ ಐತಿಹಾಸಿಕ ಕಥನವಾಗಿಯೇ ಉಳಿಯದೆ, ಅಂದಿನ ಮತ್ತು ಇಂದಿನ ಬೆಂಗಳೂರನ್ನು ಜೋಡಿಸುವ ಪ್ರಯತ್ನವಾಗಿದೆ. ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ನಿಧಾನವಾಗಿ ಮರೆಯಾಗುತ್ತಿರುವ ‘ಗಾರ್ಡನ್ ಸಿಟಿ’ಯ ಹಸಿರು ವೈಭವವನ್ನು ಮತ್ತೆ ನೆನಪಿಸುವುದರ ಜೊತೆಗೆ, ಪರಿಸರ ಸಂರಕ್ಷಣೆ ಮತ್ತು ನಗರವನ್ನು ಕಟ್ಟಿದ ಮೂಲ ಮೌಲ್ಯಗಳ ಕಡೆಗೆ ಸಮಾಜದ ಗಮನ ಸೆಳೆಯುವ ಕೆಲಸವನ್ನು ಈ ಚಿತ್ರ ಮಾಡುತ್ತದೆ. ಈ ಚಿತ್ರಕ್ಕೆ ಬೆಂಬಲ ನೀಡುವ ಮೂಲಕ ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ ಫೌಂಡೇಶನ್, ಬೆಂಗಳೂರಿನ ಪರಂಪರೆ, ಇತಿಹಾಸ ಹಾಗೂ ಹಸಿರು ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ತನ್ನ ಬದ್ಧತೆಯನ್ನು ಮತ್ತೊಮ್ಮೆ ವ್ಯಕ್ತಪಡಿಸಿದೆ.

ನೆನಪಿರಲಿ ಪ್ರೇಮ್, ಮೇಘನಾ ಗಾಂವ್ಕರ್, ರಾಜೇಶ್ ನಟರಂಗ, ಸುಧಾ ಬೆಳವಾಡಿ, ಸಂಯುಕ್ತಾ ಹೊರನಾಡು, ನಾಗಶ್ರೀ ಬೇಗಾರ್, ರಾಜೇಂದ್ರ ಕಾರಂತ್, ರಮೇಶ್ ಹಂಡಿತ್, ಬಿ.ಎಲ್. ರವಿಕುಮಾರ್, ನಟರಾಜ್ ರಾವ್ ಹಾಗೂ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವೀರ್ ಸಮರ್ಥ್ ಅವರ ಸಂಗೀತ ಹಾಗೂ ಹಿನ್ನೆಲೆ ಸಂಗೀತ, ಶಶೀರ್ ಶೃಂಗೇರಿ ಅವರ ಛಾಯಾಗ್ರಹಣ, ಅವಿನಾಶ್ ಶೃಂಗೇರಿ ಅವರ ಸಂಕಲನ, ಅಭಿಷೇಕ್ ಹೆಬ್ಬಾರ್ ಅವರ ಕಲಾನಿರ್ದೇಶನ ಈ ಚಿತ್ರಕ್ಕಿದೆ.
ಕರ್ನಾಟಕದ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಸ ತಲೆಮಾರಿಗೆ ತಲುಪಿಸುವ ಇಂತಹ ಪ್ರಯತ್ನಗಳಿಗೆ ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ ಫೌಂಡೇಶನ್ ನೀಡುತ್ತಿರುವ ಬೆಂಬಲವು ಮಹತ್ವದ ಹೆಜ್ಜೆಯಾಗಿದೆ. ನಾಡಪ್ರಭು ಕೆಂಪೇಗೌಡರ ಜೀವನದೃಷ್ಟಿ ಮತ್ತು ಅವರ ದೂರದರ್ಶಿ ಚಿಂತನೆಗಳನ್ನು ತೆರೆ ಮೇಲೆ ಮೂಡಿಸುವ ಈ ಚಿತ್ರದ ಮೂಲಕ ಬೆಂಗಳೂರಿನ ಹಸಿರು ಪರಂಪರೆಯನ್ನು ಕಾಪಾಡುವ ಜವಾಬ್ದಾರಿಯ ಬಗ್ಗೆ ಜನರಲ್ಲಿ ಮತ್ತಷ್ಟು ಅರಿವು ಮೂಡಿಸುವ ಆಶಯವೂ ಇದೆ.

“ನಮ್ಮ ಸಮಾಜಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಮಹನೀಯರನ್ನು ಮತ್ತು ಅವರ ಆದರ್ಶಗಳನ್ನು ನೆನಪಿಸುವ ಕೆಂಪಾಂಬುಧಿಯಂತಹ ಕಥೆಗಳು ನಿಜಕ್ಕೂ ಮೌಲ್ಯಯುತವಾದವು. ನಾದಪ್ರಭು ಕೆಂಪೇಗೌಡರ ಅಪ್ರತಿಮ ಕೊಡುಗೆ ಹಾಗೂ ಬೆಂಗಳೂರಿನ ಭವ್ಯ ಇತಿಹಾಸವನ್ನು ಗೌರವಿಸುವ ಇಂತಹದೊಂದು ಚಿತ್ರಕ್ಕೆ ಕೈಜೋಡಿಸಿದ ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ ಫೌಂಡೇಶನ್‌ನ ಕಾಳಜಿ ಶ್ಲಾಘನೀಯ. ನಮ್ಮ ಹೆಮ್ಮೆಯ ನಗರದ ಇತಿಹಾಸವನ್ನು ಇಂದಿನ ತಲೆಮಾರಿಗೆ ಪರಿಚಯಿಸುತ್ತಾ, ಅದರ ಹಸಿರು ಭವಿಷ್ಯವನ್ನು ಕಾಪಾಡುವ ಜವಾಬ್ದಾರಿಯನ್ನು ಮುಂದಿನ ಪೀಳಿಗೆಯಲ್ಲಿ ಮೂಡಿಸುತ್ತಿರುವ ಈ ಪ್ರಯತ್ನ ಮನಸ್ಸಿಗೆ ತುಂಬ ಹತ್ತಿರವೆನಿಸುತ್ತದೆ.” – ವಿಜಯ್ ಕಿರಗಂದೂರು, ಸಂಸ್ಥಾಪಕರು, ಹೊಂಬಾಳೆ ಫಿಲಂಸ್, ‘ಕೆಂಪಾಂಬುಧಿ’ ಚಿತ್ರದ ಟೀಸರ್, ಕರ್ನಾಟಕದ ಮಹಾನ್ ದಾರ್ಶನಿಕ ನಾಯಕನಿಗೆ ಸಲ್ಲಿಸಿರುವ ಭಾವಪೂರ್ಣ ನಮನದ ಮೊದಲ ಝಲಕ್ ಆಗಿದ್ದು, ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.

Leave a Reply

Your email address will not be published. Required fields are marked *