1
1
ಈಗಾಗಲೇ ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ರಾಯರ ಮಹಿಮೆಯನ್ನು ಅಣ್ಣಾವ್ರು ಸೇರಿದಂತೆ ಅನೇಕ ಗಾಯಕರು ಹಾಡಿನ ಮೂಲಕ ವರ್ಣಿಸಿದ್ದಾರೆ. ಇದೀಗ ನಟ, ನಿರ್ಮಾಪಕ ರಘುಭಟ್ ರಾಯರ ಅನುಗ್ರಹದಿಂದ ಮತ್ತೊಂದು ದೊಡ್ಡ ಸಾಹಸ ಮಾಡಿದ್ದಾರೆ. ಲಕ್ಷ್ಮೀಗಣೇಶ ಪ್ರೊಡಕ್ಷನ್ಸ್ ಸಹಯೋಗದಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ಅಕಾಡೆಮಿ ಅರ್ಪಿಸುವ ‘ರಾಯರ ದರ್ಶನ’ ವಿಡಿಯೋ ಹಾಡನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ.
ಈ ಆಲ್ಬಂ ಹಾಡನ್ನು ಮಂತ್ರಾಲಯದ ಶ್ರೀ ಸುಬುದೇಂದ್ರ ತೀರ್ಥ ಶ್ರೀಪಾದಂಗಳು ಬಿಡುಗಡೆ ಮಾಡಿದರು. ಸುಗುಣ ಭಟ್ ಅವರ ನಿರ್ಮಾಣದ ಈ ಹಾಡಿಗೆ ರಘು ಭಟ್ ನಿರ್ದೇಶನ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಅವರ ಸ್ವರ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಕಾಂತಾರ ಖ್ಯಾತಿಯ ಅಬ್ಬಿ ವಿ. ದನಿಯಾಗಿದ್ದಾರೆ.

ಕಳೆದ ಶನಿವಾರ ಸಂಜೆ ಮಂತ್ರಾಲಯದ ಶ್ರೀಮಠದ ಆವರಣದಲ್ಲಿ ನಿರ್ಮಿಸಲಾಗಿದ್ದ ವರ್ಣರಂಜಿತ ಭವ್ಯ ವೇದಿಕೆಯಲ್ಲಿ ಮಾತನಾಡಿದ ಶ್ರೀಸುಬುದೇಂದ್ರ ತೀರ್ಥರು, ರಾಯರ ಭಕ್ತರ ಸಹಕಾರದಿಂದ ರಾಯರ ದರ್ಶನ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ಈ ಹಾಡಿನಲ್ಲಿ ಶ್ರೀಮಠದಲ್ಲಿ ನಡೆಯುವ ನಿತ್ಯಪೂಜೆ, ಉತ್ಸವ ಹಾಗೂ ವಾರ್ಷಿಕ ಉತ್ಸವಗಳನ್ನು ಚೆನ್ನಾಗಿ ತೋರಿಸಿದ್ದಾರೆ ಎಂದು ಹೇಳಿದರು.
ನಿರ್ದೇಶಕ ರಘು ಭಟ್ ಮಾತನಾಡಿ, ‘ಕಳೆದ ಎಂಟು ತಿಂಗಳಿಂದ ನಿರಂತರ ಶ್ರಮಪಟ್ಟು ಈ ಹಾಡನ್ನು ನಿರ್ಮಾಣ ಮಾಡಿದ್ದೇವೆ. ಮಠದಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಸಮಸ್ತ ಭಕ್ತಾದಿಗಳಿಗೆ ತೋರಿಸಬೇಕು ಎಂಬ ಉದ್ದೇಶದಿಂದ ಇಂಥ ಪ್ರಯತ್ನ ಮಾಡಿದ್ದೇವೆ. ನನಗೆ ತಿಳಿದ ಹಾಗೆ ಇಡೀ ಭಾರತದಲ್ಲಿ ಮಠದ ಕುರಿತಾಗಿ ಸಮಗ್ರ ವಿಡಿಯೋ ಹಾಡನ್ನು ಯಾರೂ ಸಹ ಮಾಡಿಲ್ಲ. ಈ ಆಲ್ಬಂ ಸಾಂಗ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ಒಂದು ವರ್ಷದಲ್ಲಿ ಮಂತ್ರಾಲಯದಲ್ಲಿ ಏನೆಲ್ಲಾ ಕಾರ್ಯಕ್ರಮಗಳು ನಡೆಯುತ್ತವೆ ಎಂಬುದನ್ನು ಈ ಹಾಡಿನಲ್ಲಿ ತೋರಿಸಿದ್ದೇವೆ. ನಾನು ರಾಯರ ಭಕ್ತನಾಗಿ ಇದನ್ನು ಮಾಡಿದ್ದೇನೆ. ಈ ಸಂದರ್ಭದಲ್ಲಿ ಶ್ರೀಸುಬುದೇಂದ್ರ ತೀರ್ಥರಿಗೆ ವಿಶೇಷ ಧನ್ಯವಾದಗಳು. ನಮ್ಮ ಲಕ್ಷ್ಮೀ ಗಣೇಶ ಪ್ರೊಡಕ್ಷನ್ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಹಾಡನ್ನು ನೋಡಬಹುದು ಎಂದರು.

ಕಾರ್ಯಕ್ರಮಕ್ಕೂ ಮುನ್ನ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಹಿರಿಯನಟಿ ಗಿರಿಜಾ ಲೋಕೇಶ್, ಸಿ.ಆರ್. ಬಾಬಿ, ಪ್ರಾಜೆಕ್ಟ್ ಹೆಡ್ ಶ್ರೀನಿಧಿ ಕರಣಂ, ಗಾಯಕ ಅಬ್ಬಿ ವಿ, ನಿರ್ಮಾಪಕಿ ಸುಗುಣ ರಘು, ಶ್ರೀಶ ಜೋಯಿಸ್, ಛಾಯಾಗ್ರಾಹಕ ನಾಗೇಶ್ ಆಚಾರ್ಯ ಈ ಹಾಡಿನ ವಿಶೇಷತೆಯ ಕುರಿತಂತೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ನಾವು ಪ್ರತಿವರ್ಷ ಮೀಡಿಯಾ ಅವಾರ್ಡ್ ಕೊಡುತ್ತಾ ಬಂದಿದ್ದೇವೆ. ರಾಯರ ದರ್ಶನ ಅಲ್ಬಮ್ ಕೆಲಸದಲ್ಲಿ ಬ್ಯುಸಿಯಾಗಿದ್ದರಿಂದ ಈ ವರ್ಷದ ಅವಾರ್ಡ್ ಸಮಾರಂಭವನ್ನು ಸೆಪ್ಟೆಂಬರ್‌ನಲ್ಲಿ ಆಯೋಜಿಸುತ್ತಿದ್ದೇವೆ. ಆದರೆ, ಈ ವರ್ಷದ ಟಿ.ಎನ್.ಐ.ಟಿ. ಮೊದಲ ಮೀಡಿಯಾ ಪ್ರಶಸ್ತಿಯನ್ನು ಶ್ರೀಸುಬುದೇದ್ರ ತೀರ್ಥರಿಗೆ ನೀಡುತ್ತಿದ್ದೇವೆ. ಶ್ರೀಗಳು ಈ ಮೊದಲು ಪೂರ್ವಾಶ್ರಮದಲ್ಲಿ ಒಬ್ಬ ಪತ್ರಕರ್ತ, ಬರಹಗಾರರಾಗಿದ್ದರು. ಹಾಗಾಗಿ ಈ ವರ್ಷದ ಮೊದಲ ಟಿ.ಎನ್.ಐ.ಟಿ. ಪ್ರಶಸ್ತಿಯನ್ನು ಈ ವೇದಿಕೆಯಲ್ಲಿ ಶ್ರೀಗಳಿಗೆ ನೀಡುತ್ತಿದ್ದೇವೆ ಎಂದು ರಘು ಭಟ್ ತಿಳಿಸಿದರು.

ನಂತರ ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರಗಳ ಹಲವು ಗಣ್ಯರ ಸಮ್ಮುಖದಲ್ಲಿ ಶ್ರೀಗಳಿಗೆ ಪ್ರಶಸ್ತಿ ನೀಡಲಾಯಿತು. ಈ ಸಮಾರಂಬಕ್ಕೆ ಸಂಪಾದಕ ರವಿಹೆಗಡೆ, ಹಿರಿಯ ನಟರಾದ ಶ್ರೀನಾಥ್, ಮುಖ್ಯಮಂತ್ರಿ ಚಂದ್ರು, ನೆನಪಿರಲಿ ಪ್ರೇಮ್, ನಟಿಯರಾದ ಗಿರಿಜಾ ಲೋಕೇಶ್, ತಾರಾ ಅನುರಾಧಾ, ಅಂಜಲಿ, ಸುಧಾರಾಣಿ, ಮೇಘನಾ ಗಾಂವ್‌ಕರ್, ಅಂಜಲಿ, ಭಾವನಾರಾವ್ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ಪ್ರಮುಖರು ಆಗಮಿಸಿದ್ದರು.