Popular Posts

ಗತವೈಭವ ಸಿನಿಮಾದಲ್ಲಿ ನಾಯಕನಾಗಿ ಗಮನಸೆಳೆದಿದ್ದ ನಟ ದುಷ್ಯಂತ್ ಅವರಿಗೆ ಈಗ ಮತ್ತೊಂದು ಪ್ರಶಸ್ತಿಯ ಗರಿ ದೊರಕಿದೆ

ಇತ್ತೀಚಿಗಷ್ಟೇ ಬೆಂಗಳೂರಿನ ನಂದಿ ಲಿಂಕ್ ಮೈದಾನದಲ್ಲಿ ಚಿತ್ತಾರ ಸ್ಟಾರ್ ಅವಾರ್ಡ್ 2026 ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ನಟ ದುಷ್ಯಂತ್ ಸೆರ್ವೇಗಾರ ಶ್ರೀನಿವಾಸ್ ಅವರಿಗೆ ಅತ್ಯುತ್ತಮ ಚೋಚ್ಚಲ ನಾಯಕ ನಟ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿದೆ.
ಸಿಂಪಲ್ ಸುನಿ ನಿರ್ದೇಶನದ ಗತವೈಭವ ಸಿನಿಮಾದಲ್ಲಿ ಎಸ್.ಎಸ್.ದುಷ್ಯಂತ್ ನಾಲ್ಕು ವಿಭಿನ್ನ ಶೈಲಿಯ ಪಾತ್ರಗಳನ್ನು ನಿರ್ವಹಿಸಿದ್ದರು ಮತ್ತು ನಾಯಕಿಯಾಗಿ ಆಶಿಕ ರಂಗನಾಥ್ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಪ್ರಮುಖವಾಗಿ ಮಂಗಳೂರಿನ ಕಂಬಳ ವೀರ ಚೆನ್ನಯ್ಯ ರಾಜನ ಪಾತ್ರವನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದ ದುಷ್ಯಂತ್ ಅವರ ನಟನೆಗೆ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿತ್ತು.

“ಶ್ರೀಮತಿ ರಚನ ಅವರ ಕೈ ಹಿಡಿದ ಎರಡೇ ತಿಂಗಳಿಗೆ ಎರಡು ಅವಾರ್ಡ್ ಗಳು ನನ್ನ ಕೈ ಸೇರಿದೆ. ಗತವೈಭವ ನನಗೆ ಕೇವಲ ಸಿನಿಮ ಆಗಿರಲಿಲ್ಲ, ನನ್ನ ಜೀವನದ ಒಂದು ಅವಿಭಾಜ್ಯ ಅಂಗವೇ ಆಗಿತ್ತು. ಇರೋದೊಂದೇ ಜೀವನ, ಇಡೀ ಪ್ರಪಂಚ ನನ್ನ ಕಡೆ ತಿರುಗಿ ನೋಡುವ ಹಾಗೆ ಬದುಕಬೇಕು ಎಂಬ ಭಾವನೆ ನನ್ನದು. ಆದರೆ ಸಿನಿಮಾ ಇಂಡಸ್ಟ್ರಿಗೆ ಬರ್ತೀನಿ ಅಂದಾಗ, ತಂದೆಯವರು ‘ನಿನಗ್ಯಾಕೆ ಈ ಸಿನಿಮಾ ಎಲ್ಲಾ’ ಅಂದಿದ್ರು. ಆದರೆ ಗತವೈಭವ ಬಿಡುಗಡೆ ಆದ್ಮೇಲೆ ಅವರೇ ಸಿನಿಮಾ ನೋಡಿ, ಖುಷಿಪಟ್ಟು, ‘ನಿನ್ನ ನಿರ್ಧಾರ ಸರಿ ಇದೆ, ಚಿತ್ರರಂಗದಲ್ಲೇ ಮುಂದುವರಿ, ಒಳ್ಳೆದಾಗ್ಲಿ’ ಅಂದ್ರು. ಹಾಗಾಗಿ ಕಣ್ಣಿಗೆ ಕಾಣುವ ನನ್ನ ದೈವ, ನನ್ನ ತಂದೆ ಶ್ರೀ ಸೆರ್ವೇಗಾರ ರಾಮೇಗೌಡ ಶ್ರೀನಿವಾಸ್ ಅವರಿಗೆ ಈ ಪ್ರಶಸ್ತಿಯನ್ನು ಸಮರ್ಪಿಸುತ್ತೇನೆ” ಎಂದ ತುಮಕೂರು ಮೂಲದ ನಟ ದುಷ್ಯಂತ್, ಕಾರ್ಯಕ್ರಮದಲ್ಲಿ ಇದ್ದ ನಿರ್ದೇಶಕ ಸಿಂಪಲ್ ಸುನಿ ಹಾಗೂ ಸಹನಟಿ ಆಶಿಕ ರಂಗನಾಥ್ ಗೆ ಧನ್ಯವಾದ ತಿಳಿಸಿದರು.

ಈ ಹಿಂದೆ ಚಂದನವನ ಕ್ರಿಟಿಕ್ಸ್ ಅವಾರ್ಡ್ ‘ಚೊಚ್ಚಲ ನಾಯಕನಟ ಪ್ರಶಸ್ತಿ’ ದೊರಕಿದ್ದು, ಈಗ ಚಿತ್ತಾರ ಸ್ಟಾರ್ ಅವಾರ್ಡ್ ‘ಅತ್ಯುತ್ತಮ ಚೊಚ್ಚಲ ನಟ’ ಪ್ರಶಸ್ತಿ ದೊರಕಿದೆ. ಬೀದಿ ನಾಟಕದ ಮೂಲದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ದುಷ್ಯಂತ್ ಶ್ರೀನಿವಾಸ್, ತಮ್ಮ ಮೊದಲ ಚಿತ್ರದಲ್ಲೇ ನಾಲ್ಕು ವೈವಿಧ್ಯಮಯವಾದ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ, ತಮ್ಮ ಅಮೋಘ ಅಭಿನಯ, ಸ್ಪುರದ್ರೂಪಿ ಮುಖಲಕ್ಷಣದಿಂದ ಎಲ್ಲರ ಗಮನ ಸೆಳೆದಿದ್ದು, ಇವರು ಇನ್ನಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರೂ ಆಶ್ಚರ್ಯವಿಲ್ಲ.

Leave a Reply

Your email address will not be published. Required fields are marked *