Popular Posts

ಜೂನ್ 20ರಂದು ಮಂತ್ರಾಲಯದ ರಾಯರ ಸನ್ನಿಧಿಯಲ್ಲೇ “ರಾಯರ ದರ್ಶನ”

ಕಲಿಯುಗದ ಕಾಮಧೇನು, ಮಂತ್ರಾಲಯದ ಗುರು ಶ್ರೀರಾಘವೇಂದ್ರ ಸ್ವಾಮಿಗಳ ಕುರಿತು ಈವರೆಗೂ ಸಾಕಷ್ಟು ಭಕ್ತಿಗೀತೆಗಳು ಹಾಗೂ ಆಲ್ಬಂ ಸಹ ಬಂದಿದೆ. ಆದರೆ ಈವರೆಗೂ ಯಾರು ಹೇಳದ ಹಾಗೂ ತೋರಿಸದ ರಾಯರ ಕುರಿತಾದ ಕೆಲವು ವಿಶೇಷ ಮಾಹಿತಿಗಳು ಹಾಗೂ ಮಂತ್ರಾಲಯದಲ್ಲಿ ರಾಯರಿಗೆ ವರ್ಷಾವಧಿ ನಡೆಯುವ ವಿಶೇಷ ಉತ್ಸವಗಳನ್ನು ಕಣ್ತುಂಬಿಕೊಳ್ಳುವ “ರಾಯರ ದರ್ಶನ” ಎಂಬ ಭಕ್ತಿಗೀತೆಯ ಗುಚ್ಛ ಬಿಡುಗಡೆಗೆ ಸಿದ್ದವಾಗಿದೆ. ಲಕ್ಷ್ಮೀ ಗಣೇಶ ಪ್ರೊಡಕ್ಷನ್ಸ್ ಹಾಗೂ ದಿ ನ್ಯೂ ಇಂಡಿಯನ್ ಟೈಮ್ಸ್ ಲಾಂಛನದಲ್ಲಿ ಸುಗುಣ ರಘು ಅವರು ನಿರ್ಮಿಸಿರುವ ಈ ಆಲ್ಬಂ ಸಾಂಗ್ ಜೂನ್ 20 ರಂದು ಮಂತ್ರಾಲಯದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಮಂತ್ರಾಲಯದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರ ತೀರ್ಥರ ದಿವ್ಯ ಸಾನಿಧ್ಯದಲ್ಲಿ ಹಾಗೂ ದೇಶದ ವಿವಿಧ ವಿಭಾಗದ ಗಣ್ಯರ ಉಪಸ್ಥಿತಿಯಲ್ಲಿ ಈ ಸಮಾರಂಭ ನಡೆಯಲಿದೆ. ಅಲ್ಲದೆ ಇದೇ ಸಂಸ್ಥೆಯಿಂದ ಮಾಧ್ಯಮದವರಿಗೆ ನೀಡಲಾಗುವ “TNIT” ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ ನಲ್ಲಿ ನೆರವೇರಲಿದೆ.

ಈ ಎರಡೂ ಸಮಾರಂಭಗಳ ಕುರಿತು ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಲಕ್ಷ್ಮೀ ಗಣೇಶ ಪ್ರೊಡಕ್ಷನ್ಸ್ ಹಾಗೂ ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆಯ ಮುಖ್ಯಸ್ಥರಾದ ರಘು ಭಟ್ ಹಾಗೂ ಸುಗುಣ ರಘು ಉಪಸ್ಥಿತರಿದ್ದರು. “ರಾಯರ ದರ್ಶನ” ಆಲ್ಬಂ ನ ಟೀಸರ್ ನ್ನು ಹಿರಿಯ ನಟಿ ತಾರಾ ಅನುರಾಧ ಅನಾವರಣ ಮಾಡಿದರು.

ಹಿರಿಯ ಪತ್ರಕರ್ತರಾದ ಗಣೇಶ್ ಕಾಸರಗೋಡು, ಮಹೇಶ್ ಗೌಡ, ಮಂತ್ರಾಲಯ ಮಠದ ಶ್ರೀನಿಧಿ ಕರಣಂ, ಶ್ರೀಶ ಜೋಯಿಸ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಆಲ್ಬಂ ಸಾಂಗ್ ಗೆ ಸಂಗೀತ ಸಂಯೋಜಿಸಿರುವ ಅಜನೀಶ್ ಲೋಕನಾಥ್, ಸಿ.ಆರ್.ಬಾಬಿ, ಹಾಡು ಬರೆದಿರುವ ನಾಗಾರ್ಜುನ ಶರ್ಮ ಹಾಗೂ ಗಾಯಕ ಅಬ್ಬಿ ವಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಈ ಎರಡೂ ಕಾರ್ಯಕ್ರಮಗಳ ಸಾರಥ್ಯ ವಹಿಸಿರುವ ರಘು ಭಟ್ ಮಾತನಾಡುತ್ತ “ರಾಯರ ದರ್ಶನ” ಆಲ್ಬಂ ಸಾಂಗ್ ಅಂದುಕೊಂಡ ಹಾಗೆ ಮೂಡಿಬರಲು ಶ್ರೀ ರಾಘವೇಂದ್ರ ಸ್ವಾಮಿಗಳ ಹಾಗೂ ಶ್ರೀಸುಬಧೇಂದ್ರ ತೀರ್ಥರ ಪರಮಾನುಗ್ರಹವೆ ಕಾರಣ. ಈ ಆಲ್ಬಂ ಸಾಂಗ್ ಮಾಡಲು ಒಂದು ವರ್ಷವೇ ಬೇಕಾಯಿತು. ಕಾರಣ, ಇದರಲ್ಲಿ ಮಂತ್ರಾಲಯದಲ್ಲಿ ನಡೆಯುವ ಪೂಜೆ ಹಾಗೂ ವೈಭವೋತ್ಸವ, ಆರಾಧನೆ ಮುಂತಾದ ಉತ್ಸವಗಳ ವಿವರಣೆ ಇದೆ. ಅಜನೀಶ್ ಲೋಕನಾಥ್ ಹಾಗೂ ಸಿ. ಆರ್. ಬಾಬಿ ಅವರ ಅದ್ಭುತ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಆಲ್ಬಂ ಸಾಂಗ್ ಅನ್ನು “ಕಾಂತಾರ” ಚಿತ್ರದ ಬ್ರಹ್ಮಕಳಶ ಸಾಂಗ್ ಹಾಡಿದ ಅಬ್ಬಿ ವಿ. ಅವರು ಹಾಡಿದ್ದಾರೆ. ನಾಗಾರ್ಜುನ ಶರ್ಮ ಸಾಹಿತ್ಯ ಬರೆದಿದ್ದಾರೆ. ಜೂನ್ 20 ರಂದು ಮಂತ್ರಾಲಯದ ರಾಯರ ಸನ್ನಿಧಿಯಲ್ಲೇ “ರಾಯರ ದರ್ಶನ” ಆಲ್ಬಂ ಸಾಂಗ್ ಅದ್ದೂರಿಯಾಗಿ ಅನಾವರಣವಾಗಲಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ ಸಂಜೆ ಕೂಡ ಅಂದು ಇರುತ್ತದೆ. ಮೂರು ರಾಜ್ಯಗಳ ಉಪ ಮುಖ್ಯಮಂತ್ರಿಗಳನ್ನು ಸಮಾರಂಭಕ್ಕೆ ಆಹ್ವಾನಿಸುವ ಪ್ರಯತ್ನ ನಡೆಯುತ್ತಿದೆ.

ಇನ್ನೂ ನಮ್ಮ ಸಂಸ್ಥೆಯಿಂದ ಕಳೆದ ಒಂಭತ್ತು ವರ್ಷಗಳಿಂದ ವಿದ್ಯುನ್ಮಾನ ಮಾಧ್ಯಮದವರಿಗೆ “TNIT” ಪ್ರಶಸ್ತಿ ಕೊಡುತ್ತಾ ಬರುತ್ತಿದ್ದೇವೆ. ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದ ಈ ಪ್ರಶಸ್ತಿ ಕಳೆದೆರಡು ವರ್ಷಗಳಿಂದ ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ಮಾಧ್ಯಮದವರನ್ನು ಗರುತಿಸಿ ಕೊಡಲಾಗುತ್ತಿದೆ. ಈ ಬಾರಿ ವಿದ್ಯುನ್ಮಾನ ಮಾಧ್ಯಮದ ಜೊತೆಗೆ ಮುದ್ರಣ ಮಾಧ್ಯಮದವರಿಗೂ ಸಹ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದೇವೆ. ಆಗಸ್ಟ್ ನಲ್ಲಿ ಬೆಂಗಳೂರಿನಲ್ಲೇ ಈ ಸಮಾರಂಭ ನಡೆಯಲಿದೆ. ಸದ್ಯದಲ್ಲೇ ದಿನಾಂಕವನ್ನು ಪ್ರಕಟಿಸಲಾಗುತ್ತದೆ ಎಂದರು.

ಅಜನೀಶ್ ಲೋಕನಾಥ್ ಮಾತನಾಡುತ್ತ ತಮ್ಮ ಜೀವನದಲ್ಲಿ ಆದ ರಾಯರ ಅನುಗ್ರಹವನ್ನು ಮಾತುಗಳ ಮೂಲಕ ಹಂಚಿಕೊಂಡರು. ನಾನು ಹಾಗೂ ಬಾಬಿ ಅವರು ರಾಯರ ಮೇಲಿನ ಅಪಾರ ಭಕ್ತಿಯಿಂದ ಈ ಆಲ್ಬಂ ಗೆ ಸಂಗೀತ ಸಂಯೋಜನೆ ಮಾಡಿದ್ದೇವೆ. ಇದು ನಮ್ಮ ಪುಣ್ಯ. ಕಾಂತಾರದ “ಬ್ರಹ್ಮಕಳಶ”ದ ಹಾಡನ್ನು ಹಾಡಿರುವ ಕೆನಡಾ ಮೂಲದ ಅಬ್ಬಿ ವಿ. ಅವರು ರಾಯರ ಮೇಲಿನ ಈ ಹಾಡನ್ನು ಬಹಳ ಸುಶ್ರಾವ್ಯವಾಗಿ ಹಾಡಿದ್ದಾರೆ. ಅಷ್ಟೇ ಚೆನ್ನಾಗಿ ನಾಗಾರ್ಜುನ ಶರ್ಮ ಬರೆದಿದ್ದಾರೆ ಎಂದರು. ‌‌ ‌ ‌‌‌‌‌‌ ‌ ‌‌‌‌‌ ಟೀಸರ್ ಬಿಡುಗಡೆ ಮಾಡಿದ ನಟಿ ತಾರಾ ಅನುರಾಧ, ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು, ” ಕ್ಯೂ.ಪಿ.ಎಲ್” ನ ಮುಖ್ಯಸ್ಥರಾದ ಮಹೇಶ್ ಗೌಡ ಮಾತನಾಡಿ, ರಘು ಭಟ್ ದಂಪತಿಗಳ ಎರಡು ಪ್ರಯತ್ನಕ್ಕೆ ಯಶಸ್ಸನ್ನು ಕೋರಿದರು. ಗಾಯಕ ಅಬ್ಬಿ ವಿ “ರಾಯರ ದರ್ಶನ” ಆಲ್ಬಂನ ಕೆಲವು ಸಾಲುಗಳನ್ನು ಹಾಡಿದರು. ಗೀತರಚನೆಕಾರ ನಾಗಾರ್ಜುನ ಶರ್ಮ ಹಾಡು ಹುಟ್ಟಿದ ಸಮಯದ ಕುರಿತು ವಿವರಣೆ ನೀಡಿದರು.

Leave a Reply

Your email address will not be published. Required fields are marked *