1
1
ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿರುವ ‘ಲವ್ ಮಾಕ್ಟೇಲ್ 3’ ಚಿತ್ರದ ಓಟಿಟಿ ಬಿಡುಗಡೆಗೂ ದಿನಾಂಕ ನಿಗದಿಯಾಗಿದೆ. ಈ ಚಿತ್ರವು ಮೇ 8ರಂದು ಜೀ5 ಓ.ಟಿ.ಟಿ.ಯಲ್ಲಿ ಬಿಡುಗಡೆ ಆಗಲಿದೆ. ಇದು ಲವ್ ಮಾಕ್ಟೇಲ್ ಸರಣಿ ಚಿತ್ರಗಳ ಕೊನೆಯ ಸಿನಿಮಾ.
ಲವ್ ಮಾಕ್ಟೇಲ್ 3 ತಂದೆ ಮಗಳ ನಡುವೆ ನಡೆಯುವ ಭಾವನಾತ್ಮಕ ಕಥೆಯನ್ನು ಹೇಳಲಿದೆ, ಡಾರ್ಲಿಂಗ್ ಕೃಷ್ಣ ಅವರ ಕಲ್ಪನೆಯ ಕಥೆಗೆ ಮತ್ತು ಮಿಲನ ನಾಗರಾಜ್, ಯದುನಂದನ್ ಚಿತ್ರನಾಟಕ ರೂಪ ಕೊಟ್ಡಿದ್ದಾರೆ. ಡಾರ್ಲಿಂಗ್ ಕೃಷ್ಣ ಅವರೇ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕ್ರಿಸ್ಮಿ ಫಿಲಂಸ್ ಲಾಂಛನದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿರುತ್ತಾರೆ.
ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್, ಸಂವೃತಾ, ಅಮೃತಾ ಐಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್ ಮುಂತಾದವರು ನಟಿಸಿರುತ್ತಾರೆ.

ಲವ್ ಮಾಕ್ಟೇಲ್ 2 ಯಶಸ್ಸಿನ ನಂತರ, ಹಲವಾರು ವರ್ಷಗಳಾದ ಮೇಲೆ ಲವ್ ಮಾಕ್ಟೇಲ್ 3 ತೆರೆಗೆ ಬಂದಿತ್ತು. ಈ ಕಥೆ ಆದಿತ್ಯ (ಡಾರ್ಲಿಂಗ್ ಕೃಷ್ಣ) ಹಾಗೂ ನಿಧಿ(ಸಂವೃತಾ) ಸುತ್ತ ಸುತ್ತುತ್ತದೆ. ನಿಧಿಯನ್ನು ಆದಿತ್ಯ ಲವ್ ಮಾಕ್ಟೇಲ್ 2ನಲ್ಲಿ ದತ್ತು ತೆಗೆದುಕೊಂಡಿರುತ್ತಾನೆ. ಅವರಿಬ್ಬರ ನಡುವಿನ ತಂದೆ-ಮಗಳ ಬಾಂಧವ್ಯವನ್ನು ಈ ಕಥೆ ಎತ್ತಿ ಹಿಡಿಯಲಿದೆ. ಕಥೆಯು ಈ ತಂದೆ-ಮಗಳ ದಿನಚರಿ, ತುಂಟಾಟ, ಅವರಿಬ್ಬರ ನಡುವಿನ ಪ್ರೀತಿ, ಅವರೊಂದಿಗೆ ಅವರ ಮನೆಯ ಕೇರ್‌ಟೇಕರ್ ಜಗ್ಗನ ತಮಾಷೆ ಮುಂತಾದವುಗಳನ್ನು ಹೇಳುತ್ತದೆ.
ಡಾ.ಶಾಂತಾ, ನಿಧಿಯ ನಿಜವಾದ ಅಜ್ಜಿ ತನ್ನ ಮೊಮ್ಮಗಳನ್ನು ಹಿಂದಿರುಗಿಸಲು ಒತ್ತಾಯಿಸಿದಾಗ ಈ ಸುಂದರವಾದ ಸಂಸಾರಕ್ಕೆ ಸಿಡಿಲು ಬಡಿದಂತೆ ಆಗುತ್ತದೆ. ಇದನ್ನು ಆದಿತ್ಯ ಹೇಗೆ ಸರಿಪಡಿಸುತ್ತಾನೆ, ಅವನು ಎದುರಿಸುವ ಸವಾಲುಗಳು, ಆ ಭಾವನಾತ್ಮಕ ತೊಳಲಾಟ ಇತ್ಯಾದಿಗಳನ್ನು ಈ ಚಿತ್ರವು ಬಿಂಬಿಸುತ್ತದೆ. ಒಟ್ಟಾರೆ, ಲವ್ ಮಾಕ್ಟೇಲ್ 3 ಒಂದು ವಿಶೇಷವಾದ ಎಮೋಷನಲ್ ಡ್ರಾಮಾ ಚಿತ್ರವಾಗಿದೆ. ಸ್ನೇಹ, ಪ್ರೀತಿ, ಬಾಂಧವ್ಯದ ವ್ಯಾಲ್ಯೂ ಏನೆಂದು ಈ ಚಿತ್ರ ಹೇಳುತ್ತದೆ.
ಲವ್ ಮಾಕ್ಟೇಲ್ 3 ಚಿತ್ರದ ಡಿಜಿಟಲ್ ಬಿಡುಗಡೆ ಕುರಿತು ಮಾತನಾಡಿದ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಡಾರ್ಲಿಂಗ್ ಕೃಷ್ಣ, “ಲವ್ ಮಾಕ್ಟೇಲ್ ಸರಣಿಯು ನನ್ನ ಸಿನಿ ಪಯಣದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ಲವ್ ಮಾಕ್ಟೇಲ್ 3 ಚಿತ್ರವು ಈ ಹಿಂದಿನ ಎರಡು ಕಥೆಗಳಿಗೆ ಒಂದು ಸಿಹಿಯಾದ ಅಂತ್ಯವಾಗಿದೆ. ಈ ಚಿತ್ರವು ಪ್ರೀತಿಯ ದೈವೀ ರೂಪವಾದ ವಾತ್ಸಲ್ಯವನ್ನು ಹೇಳುತ್ತದೆ, ತಂದೆ-ಮಗಳ ನಡುವಿನ ಬಾಂಧವ್ಯವನ್ನು ಹೇಳುತ್ತದೆ. ಈ ಚಿತ್ರವು ಜೀ5ನಲ್ಲಿ ಬಿಡುಗಡೆ ಆಗುತ್ತಿರುವುದು ನನಗೆ ಸಂತಸ ತಂದಿದೆ” ಎಂದು ಖುಷಿ ವ್ಯಕ್ತಪಡಿಸಿದರು.
ಮೇ 8ಕ್ಕೆ ಲವ್ ಮಾಕ್ಟೇಲ್ 3 ಹಾಗೂ ಜೀ5ನ ಎಲ್ಲಾ ಚಿತ್ರಗಳನ್ನು ಕೇವಲ 129/- ಕ್ಕೆ ವೀಕ್ಷಿಸಬಹುದಾಗಿದೆ.