1
1
ಮಧುಸೂದನ್ ಹವಾಲ್ದಾರ್ ಅವರ ನಿರ್ದೇಶನದ “ಶ್ರೀಜಗನ್ನಾಥದಾಸರು ಭಾಗ 2” ಚಿತ್ರ 50 ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ. ಈ ಸಂಭ್ರಮದ ಸಮಾರಂಭವನ್ನು ನಿರ್ಮಾಪಕರೂ ಆದ ಮಧುಸೂದನ್ ಹವಾಲ್ದಾರ್ ಅವರು ಆಯೋಜಿಸಿದ್ದರು. ಉತ್ತರಾದಿ ಮಠಾಧೀಶರಾದ ಶ್ರೀಸತ್ಯಾತ್ಮ ತೀರ್ಥರು ಸಮಾರಂಭಕ್ಕೆ ಆಗಮಿಸಿ ಅನುಗ್ರಹ ಸಂದೇಶ ನೀಡಿದರು. ಡಾ||ಸತ್ಯಧ್ಯಾನಾಚಾರ್ಯ ಕಟ್ಟಿ, ಡಾ|| ವಾಸುದೇವ ಅಗ್ನಿಹೋತ್ರಿ, ಸಿ.ಆರ್.ಮುರಳಿ, ಗಾಯಕ ರಾಯಚೂರು ಶೇಷಗಿರಿದಾಸ್ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಆಸ್ತಿಕರನ್ನು ಭಕ್ತಿಯ ಮಾರ್ಗಕ್ಕೆ ಕೊಂಡೊಯ್ದವರಲ್ಲಿ ಶ್ರೀಜಗನ್ನಾಥ ದಾಸರು ಪ್ರಮುಖರು. ಹರಿಕಥಾಮೃತಸಾರದಂತಹ ಮೇರುಕೃತಿಯನ್ನು ನೀಡಿದ ಮಹಾನುಭಾವರು. ಇರುಳಲ್ಲಿ ಸೂರ್ಯನ ದರ್ಶನ ಮಾಡಿಸಿದ ನಮ್ಮ ಪರಂಪರೆಯ ಶ್ರೀಸತ್ಯಭೋದ ತೀರ್ಥರ ಶಿಷ್ಯರು ಶ್ರೀಜಗನ್ನಾಥ ದಾಸರು. ಅಂತಹ ಹರಿದಾಸರ ಚರಿತ್ರೆಯನ್ನು ಮಧುಸೂದನ್ ಹವಾಲ್ದಾರ್ ಅವರು ಸಿನಿಮಾ ಮೂಲಕ ಜನರ ಬಳಿಗೆ ತಂದಿದ್ದಾರೆ. ಈಗಾಗಲೇ “ಶ್ರೀಜಗನ್ನಾಥ ದಾಸರು”, ಶ್ರೀವಿಜಯದಾಸರು”, “ಶ್ರೀಮಹಿಪತಿದಾಸರು”, ” ಶ್ರೀಪ್ರಸನ್ನವೆಂಕಟದಾಸರು” ಇಂಥ ಚಿತ್ರಗಳ ನಿರ್ದೇಶಕ ಮಧುಸೂದನ್ ಹವಾಲ್ದಾರ್ ಅವರ ನಿರ್ದೇಶನ ಸಾರಥ್ಯದ “ಶ್ರೀಜಗನ್ನಾಥದಾಸರು ಭಾಗ ೨” ಚಿತ್ರವು 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಮುಂದೆಯೂ ಮಧುಸೂದನ್ ಅವರು ಇಂತಹ ದಾರ್ಶನಿಕರ ಜೀವನ ಚರಿತ್ರೆಯ ಚಿತ್ರಗಳನ್ನು ಹೆಚ್ಚಾಗಿ ನಿರ್ದೇಶಿಸಲಿ ಎಂದು ಶ್ರೀಸತ್ಯಾತ್ಮ ತೀರ್ಥರು ಅನುಗ್ರಹ ಸಂದೇಶ ನೀಡಿ ಆಶೀರ್ವದಿಸಿದರು. ಇದೇ ಸಂದರ್ಭದಲ್ಲಿ ಶ್ರೀಗಳವರು ಮಧುಸೂದನ್ ಅವರ ಮುಂದಿನ ನಿರ್ದೇಶನದ “ನಮ್ಮ ರಾಯರು” ಚಿತ್ರದ ಲಾಂಛನವನ್ನು ಅನಾವರಣಗೊಳಿಸಿದರು.

ತಂದೆ – ತಾಯಿಯ ಆಶೀರ್ವಾದದಿಂದ ಹಾಗೂ ಮಿತ್ರರ ಸಹಕಾರದಿಂದ ಇಂತಹ ಚಿತ್ರವನ್ನು ಜನರ ಮುಂದೆ ತರಲು ನನಗೆ ಸಾಧ್ಯವಾಯಿತು. ಶ್ರೀಮಾತಾಂಬುಜ ಮೂವೀಸ್ ಮೂಲಕ ಈ ಚಿತ್ರ ನಿರ್ಮಾಣವಾಗಿದೆ. ಈ ಚಿತ್ರ ನಾನು ಮಾಡಿದ್ದಲ್ಲ. ಶ್ರೀಜಗನ್ನಾಥದಾಸರೇ ನನ್ನೊಳಗೆ ನಿಂತು ಮಾಡಿಸಿದ್ದು ಎಂದ ನಿರ್ದೇಶಕ ಮಧುಸೂದನ್ ಹವಾಲ್ದಾರ್, ಚಿತ್ರತಂಡಕ್ಕೆ ಹಾಗೂ ಆಗಮಿಸಿದ ಗಣ್ಯರಿಗೆ ಧನ್ಯವಾದ ತಿಳಿಸಿದರು. ಸುಂದರವಾದ ವಿಠಲನ ಮೂರ್ತಿಯ ಸ್ಮರಣಿಕೆ ನೀಡಿ ಚಿತ್ರತಂಡದವರನ್ನು ಹಾಗೂ ಅತಿಥಿಗಳನ್ನು ಸನ್ಮಾನಿಸಿದರು.